ಜಿಲ್ಲೆಯ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕು: ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ

 ಜಿಲ್ಲೆಯ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕು: ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ Koppal: Kalyana Karnataka Utsav Day celebration

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಕೊಪ್ಪಳ 17 : ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಹೇಳಿದರು.

ಅವರು ಬುಧವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ 78ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ತಮಗೆಲ್ಲ ತಿಳಿದಿರುವ ಹಾಗೆ 1947 ಆಗಸ್ಟ್‌ 15 ರಂದು ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಈ ಭಾಗದಲ್ಲಿ ಹೈದ್ರಾಬಾದ್ ನಿಜಾಮರ ಆಡಳಿತವಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಸುಮಾರು 670 ಕ್ಕಿಂತ ಹೆಚ್ಚು ಸಂಸ್ಥಾನಗಳು ಆಡಳಿತ ಮಾಡುತ್ತಿದ್ದವು. ಬಹುತೇಕ ಸಂಸ್ಥಾನಗಳು ಭಾರತದೊಂದಿಗೆ ವೀಲೀನ ಆಗಲು ಒಪ್ಪಿಗೆ ಸೂಚಿಸಿದರು. ಹೈದ್ರಾಬಾದ್ ನಿಜಾಮರು ನಾವು ಪ್ರತ್ಯೇಕ ರಾಷ್ಟ್ರವಾಗಿ ಉಳಿಯುತ್ತೇವೆ ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇದರ ವಿಮೋಚನೆಗಾಗಿ ಈ ಭಾಗದ ನೇತೃತ್ವವನ್ನು ವಹಿಸಿದ್ದ ವೀರಭದ್ರ​‍್ಪ ಶಿರೂರು, ಸಿ.ಎಂ ಚುರ್ಚಿಹಾಳಮಠ, ಪುಂಡಲಿಕಪ್ಪ ಜ್ಞಾನಮೂಠೆ, ಶಿವಮೂರ್ತಿ ಸ್ವಾಮಿಗಳು, ಶರಣಗೌಡ ಇನಾಮದಾರ, ರಾಮಚಂದ್ರ ವೀರ​‍್ಪನವರು ಸೇರಿದಂತೆ ಅನೇಕರು ಬಹಳಷ್ಟು ಹೋರಾಟಗಳನ್ನು ಮಾಡಿದ್ದರು. ಅಂದಿನ ಕೇಂದ್ರ ಗೃಹ ಮಂತ್ರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಪೊಲೀಸ್ ಕಾರ್ಯಚರಣೆ ಮಾಡುವುದಕ್ಕೆ ನಿರ್ಧಾರ ಮಾಡಿ, ಅದಕ್ಕೆ ಆಪರೇಷನ್ ಪೋಲೋ ಹೆಸರಿಟ್ಟು ಮೇಜರ್ ಜನರಲ್ ಚೌದ್ರಿ ಅವರ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆಯಿತು. ರಜಾಕಾರರ ದೌರ್ಜನ್ಯ ಮತ್ತು ಹಿಂಸಾಚಾರಕ್ಕೆ ಈ ಭಾಗದ ಜನ ಬೇಸೆತ್ತಿದ್ದರು. ಇದಕ್ಕಾಗಿ ಅನೇಕ ಹೋರಾಟಗಾರರ ತ್ಯಾಗ, ಬಲಿದಾನಗಳಿದ್ದು, ಈ ದಿನ ನಾವು ಅವರನ್ನು ಸ್ಮರಿಸಬೇಕಿದೆ ಎಂದರು.ಈ ದಿನ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಾಕ್ ಸ್ವಾತಂತ್ರ್ಯ, ಸಂಘಟನಾ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಸಿಕ್ಕಿತು. ಆದರೂ ಸಹ ನಿಜಾಮರ ಆಡಳಿತದ ಫಲವಾಗಿ ನಾವುಗಳು ಯಾವ ರೀತಿ ಹಿಂದುಳಿದಿದ್ದೇವೊ ಇವತ್ತಿಗೂ ಸಹ ಹಾಗೇ ಹಿಂದುಳಿದಿದ್ದೇವೆ. ಮಾನವ ಅಭಿವೃದ್ಧಿ ಸೂಚಾಂಕವನ್ನು ನೋಡಿದರೆ, ಶೈಕ್ಷಣಿಕ ಮಟ್ಟದಲ್ಲಿರಬಹುದು, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಇರಬಹುದು ನಾವುಗಳು ಇವತ್ತಿಗೂ ಹಿಂದುಳಿದಿದ್ದೇವೆ. ಇವುಗಳಿಂದ ಹೊರಬರುವ ನಿಟ್ಟಿನಲ್ಲಿ ಈ ಭಾಗವನ್ನು 371ಜೆ ವ್ಯಾಪ್ತಿಗೆ ತರಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಿಂದ ಈ ಭಾಗದ ಮೂಲಭೂತ ಸೌಕರ್ಯಗಳಿಗೆ ಹಾಗೂ ಮಾನವ ಅಭಿವೃದ್ಧಿಯ ಸೂಚಾಂಕವನ್ನು ಇನ್ನೂ ಉತ್ತಮಗೊಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನಾವೆಲ್ಲರೂ ಸೇರಿ ಈ ಭಾಗವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಬೇಕಾದಂತ ಅವಶ್ಯಕತೆಯಿದೆ. ಎಲ್ಲರಿಗೂ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಶುಭಾಶಯಗಳು ಎಂದರು.   

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿ.ಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಭೂದಾಖಲೆ ಇಲಾಖೆಯ ಉಪನಿರ್ದೇಶರಾದ ಭಾಗ್ಯಮ್ಮ ಬಿ., ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗಮಣಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.