ಕೋಮಲಾ ಕುದರಿಮೋತಿಯವರು ಕವಿ ಹೃದಯದವರು: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಡಗಿ

ಲೋಕದರ್ಶನ ವರದಿ

ಕೊಪ್ಪಳ 29: ಕೋಮಲಾ ಕುದರಿಮೋತಿಯವರು ಕವಿ ಹೃದಯದವರು. ಮೂಲತಃ ಹಾವೇರಿಯವರಾದ ಇವರು ಕೊಪ್ಪಳದ ಪ್ರತಿಷ್ಠಿತ ಮನೆತನವಾದ ಕುದರಿಮೋತಿ ಕುಟುಂಬದ ಸೊಸೆಯಾಗಿ ಬಂದವರು. ಶಿಕ್ಷಣ ಕ್ಷೇತ್ರದಲ್ಲಿದ್ದವರೇ ಸಾಮಾನ್ಯವಾಗಿ ಸಾಹಿತ್ಯಿಕವಾಗಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.  ಆದರೆ ಕೋಮಲಾ ಕುದರಿಮೋತಿಯವರು ಯಾವುದೇ ಶಿಕ್ಷಕರಲ್ಲದೇ, ಯಾವುದೇ ಸರಕಾರಿ ಸೇವೆಯಲ್ಲಿರದೇ ಗೃಹಿಣಿಯಾಗಿದ್ದುಕೊಂಡು, ಕೇವಲ ತಮ್ಮ ಅನುಭವಜನ್ಯದಿಂದ ಮೂಡಿದ ಭಾವನೆಗಳನ್ನು ಕಾವ್ಯರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾಗಿ, ಸದಾ ಕ್ರಿಯಾಶೀಲರಾಗಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಕ್ಕಾಗಿ ಆ ಸಂಘಕ್ಕೆ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಲಭಿಸಿದೆ.  ಅನೇಕ ಆದರ್ಶ ವ್ಯಕ್ತಿಗಳ ಬದುಕನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರ ಕವನಗಳಲ್ಲಿ ಮಹಿಳಾಪರ ಚಿಂತನೆಗಳಿವೆ. ಅನನ್ಯ ಮತ್ತು ಅರ್ಥಪೂರ್ಣ ಹಾಗೂ ವೈವಿಧ್ಯಮಯ ಕವನಗಳನ್ನು ಬರೆಯುವುದರ ಮೂಲಕ ಕೊಪ್ಪಳದ ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಹೆಸರನ್ನು ಪಡೆದಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡ ರಾಜ್ಯಮಟ್ಟದ ಮಕ್ಕಳ 5ನೇ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕೋಮಲಾ ಕುದರಿಮೋತಿಯವರ 'ಮುತ್ತಿನ ಹನಿ' ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಹರಗಿನಡೋಣಿ ಮಠದ ಅಭಿನವ ಸಿದ್ಧಲಿಂಗಶಿವಾಚಾರ್ಯ ಮಹಾಸ್ವಾಮಿಗಳು, ಬಸವನಬಾಗೇವಾಡಿಯ ಭೂಕೈಲಾಸ ಗದ್ದುಗೆ ಹಿರೇಮಠದ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯ ಅಧ್ಯಕ್ಷರಾದ ಮಹೇಶಬಾಬು ಸುವರ್ೆ, ಉಪಾಧ್ಯಕ್ಷರಾದ ಸಿದ್ದಪ್ಪ ಹಂಚಿನಾಳ, ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ, ಸಿರಿಗನ್ನಡ ವೇದಿಕೆಯ ಗೌರವಾಧ್ಯಕ್ಷರಾದ ಎಂ.ಬಿ.ಅಳವಂಡಿ, ಸಂಶೋಧಕರಾದ ಹನುಮಂತರೆಡ್ಡಿ ಬಳ್ಳಾರಿ, ಲೇಖಕಿಯರಾದ ಕೋಮಲಾ ಕುದರಿಮೋತಿ, ಅನ್ನಪೂರ್ಣ ಮನ್ನಾಪೂರ, ರೇಖಾ ಜಮದಂಡಿ, ಅವನಿ ಗಂಗಾವತಿ, ರಂಗನಟಿ ಪ್ರೇಮಾ ಗುಳೇದಗುಡ್ಡ, ಶಿಕ್ಷಣಪ್ರೇಮಿಯಾದ ಸಿದ್ಧಲಿಂಗಯ್ಯ ಹಿರೇಮಠ,  ಪತ್ರಕರ್ತರಾದ   ಎಂ.ಸಾದಿಕ್ ಅಲಿ ಮುಂತಾದವರು  ವೇದಿಕೆಯ ಮೇಲೆ ಉಪಸ್ಥಿತರಿದ್ದರು.ವಾಯ್.ಬಿ.ಜೂಡಿ ನಿರೂಪಿಸಿದರು. ಫಕೀರಪ್ಪ ಗೋಟೂರು ಸ್ವಾಗತಿಸಿದರು. ಶಿವಕುಮಾರ ಹಿರೇಮಠ ವಂದಿಸಿದರು.