ನವದೆಹಲಿ, ಜ 27,ನಂಬಲಾಗದ ರೀತಿ ಇಹಲೋಕ ತ್ಯಜಿಸಿದ ಬ್ಯಾಸ್ಕೆಟ್ ಬಾಲ್ ದಂತಕತೆ ಕೋಬ್ ಬ್ರಂಯಾಟ್ ಅವರಿಗೆ ಇಡೀ ವಿಶ್ವದ ಕ್ರೀಡಾವಲಯವೇ ಕಂಬಲಿ ಮಿಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ಜಗತ್ತಿನ ಕ್ರೀಡಾ ದಿಗ್ಗಜರಿಂದ ತೀವ್ರ ಸಂತಾಪ ವ್ಯಕ್ತವಾಗಿದೆ.41ರ ವಯಸ್ಸಿನ ಲಾಸ್ ಏಂಜಲಿಸ್ ಸ್ಟೈಕರ್ಸ್ ತಂಡದ ಮಿನುಗುತಾರೆ ಬ್ರಯಾಂಟ್, ಅವರು ಭಾನುವಾರ ಬೆಳಗ್ಗೆ ತಮ್ಮ ಪುತ್ರಿ ಗಿಯನ್ನಾ ಅವರೊಂದಿಗೆ ಪಂದ್ಯದ ನಿಮಿತ್ತ ಹೆಲಿಕಾಪ್ಟರ್ ನಲ್ಲಿ ಪಯಣ ಬೆಳೆಸಿದ್ದರು. ಈ ವೇಳೆ ದಟ್ಟವಾದ ಮಂಜಿನಲ್ಲಿ ಹೆಲಿಕಾಪ್ಟರ್ ಜ್ವಾಲೆಗೆ ಸಿಲುಕಿ ಬೆಟ್ಟದ ಗುಂಡಿಗೆ ಉರುಳಿತು. ಇದರ ಪರಿಣಾಮ ಬ್ರಂಯಾಂಟ್ ಹಾಗೂ ತನ್ನ ಪುತ್ರಿ ಗಿಯನ್ನಾ ಅವರೊಂದಿಗೆ ಪಯಣ ಬೆಳೆಸಿದ್ದ ಇತರೆ ಏಳು ಮಂದಿ ಸಾವಿಗೀಡಾದರು.ಬ್ಯಾಸ್ಕೆಟ್ ಬಾಲ್ ದಂತಕತೆ ಸಾವಿಗೆ ಕಂಬನಿ ಮಿಡಿದಿರುವ ಬಾರ್ಸಿಲೋನಾ ಮುಂಚೂಣಿ ಆಟಗಾರ ಲಿಯೊನೆಲ್ ಮೆಸ್ಸಿ,"ನನ್ನ ಬಳಿ ಅವರ ಬಗ್ಗೆ ಹೇಳಲು ಪದಗಳಿಲ್ಲ. ನನ್ನ ಎಲ್ಲ ಪ್ರೀತಿಯು ಕೋಬ್ ಕುಟುಂಬ ಹಾಗೂ ಅವರ ಸ್ನೇಹಿತರ ಜತೆ ಇರಲಿದೆ. ನಿಮ್ಮನ್ನು ಭೇಟಿಯಾಗಿದ್ದು ಹಾಗೂ ನಿಮ್ಮೊಂದಿಗೆ ಕಳೆದ ಸಮಯ ಅಮೂಲ್ಯವಾದದ್ದು.
ನಿಮ್ಮ ಪ್ರತಿಭೆ ಇತರರಿಗಿಂತ ವಿಶೇಷ,'' ಎಂದು ಸಂತಾಪ ಸೂಚಿಸಿದ್ದಾರೆ. ುವೆಂಟಾಸ್ ಮುಂಚೂಣಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ,''ಕೋಬ್ ಮತ್ತು ಅವರ ಮಗಳು ಗಿಯನ್ನಾ ಅವರ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಕೋಬ್ ಅನೇಕರಿಗೆ ನಿಜವಾದ ದಂತಕಥೆ ಮತ್ತು ಸ್ಫೂರ್ತಿಯಾಗಿದ್ದಾರೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲ ಕುಟುಂಬಗಳಿಗೆ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ,'' ಎಂದು ಟ್ವೀಟ್ ಮಾಡಿದ್ದಾರೆ.
ಟೆನಿಸ್ ಸ್ಟಾರ್ ಆಟಗಾರ ನೊವಾಕ್ ಜೊಕೊವಿಚ್,"ನನ್ನ ಹೃದಯವು ಇಂದಿನ ಸುದ್ದಿ ಕೇಳಿ ನಿಜವಾಗಿಯೂ ಶೋಕಿಸುತ್ತಿದೆ. ಕೋಬ್ ನನಗೆ ಉತ್ತಮ ಮಾರ್ಗದರ್ಶಕ ಮತ್ತು ಸ್ನೇಹಿತರಾಗಿದ್ದರು. ನೀವು ಮತ್ತು ನಿಮ್ಮ ಮಗಳು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಿಸುವಿರಿ. ಈ ದುರಂತದಿಂದ ಬಳಲುತ್ತಿರುವ ಬ್ರಯಾಂಟ್ ಹಾಗೂ ಪ್ರತಿ ಕುಟುಂಬಕ್ಕೆ ನನ್ನ ಆಳವಾದ ಸಹಾನುಭೂತಿ ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ನನ್ನ ಸ್ನೇಹಿತನ ಆತ್ಮಕ್ಕೆ ಶಾಂತಿ ಸಿಗಲಿ,'' ಎಂದು ಟ್ವೀಟ್ ಮಾಡಿದ್ದಾರೆ. ವಿಶ್ವದ ಅಗ್ರ ಶ್ರೇಯಾಂಕಿತ ಟೆನಿಸ್ ಪಟು ರಫೆಲ್ ನಡಾಲ್,''ವಿಶ್ವದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರ ದುರಂತ ಸಾವಿನ ಭಯಾನಕ ಸುದ್ದಿಯೊಂದಿಗೆ ನಾನು ಇಂದು ಬೆಳಿಗ್ಗೆ ಎಚ್ಚರಗೊಂಡಿದ್ದೇನೆ. ಕೋಬ್ ಬ್ರಯಾಂಟ್, ಅವರ ಮಗಳು ಗಿಯನ್ನಾ ಮತ್ತು ಇತರ ಪ್ರಯಾಣಿಕರು. ಅವರ ಪತ್ನಿ ಮತ್ತು ಕುಟುಂಬಗಳಿಗೆ ನನ್ನ ಸಂತಾಪ. ನಾನು ಆಘಾತಕ್ಕೊಳಗಾಗಿದ್ದೇನೆ,'' ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಅಮೆರಿಕ ಉಪನಗರ ಲಾಸ್ ಏಂಜಲೀಸ್‌ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಎನ್‌ಬಿಎ ದಂತಕಥೆ ಕೋಬ್ ಬ್ರಯಾಂಟ್ ಸುದ್ದಿ ಕೇಳಿ ಭಾರತೀಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಘಾತ ವ್ಯಕ್ತಪಡಿಸಿದ್ದಾರೆ.ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತೀಯ ತಂಡದ ಜೊತೆಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೋಬ್ ಬ್ರಯಾಂಟ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
"ಇಂದು ಈ ಸುದ್ದಿ ಕೇಳಿ ಆಘಾತವಾಗಿದೆ. ಬಾಲ್ಯದಲ್ಲಿ ಬ್ರಯಾಂಟ್ ಅವರ ಆಟವನ್ನು ಟಿವಿಯಲ್ಲಿ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದೆ. ಒಬ್ಬ ಜಾದೂಗಾರನ ರೀತಿ ಅಂಗಳದಲ್ಲಿ ಕೋಬ್ ವರ್ತಿಸುತ್ತಿದ್ದರು. ಜೀವನವು ತುಂಬಾ ಅನಿರೀಕ್ಷಿತ ಮತ್ತು ಚಂಚಲವಾಗಿದೆ. ಅಪಘಾತದಲ್ಲಿ ಅವರ ಮಗಳು ಗಿಯನ್ನಾ ನಿಧನರಾದರು. ನನಗೆ ಸಂಪೂರ್ಣ ಎದೆಗುಂದಿದೆ. ಬ್ಯಾಸ್ಕೆಟ್ ಬಾಲ್ ದಂತಕತೆಯೆ ಕುಟುಂಬಕ್ಕೆ ಸಂತಾಪಗಳು,'' ಎಂದು ವಿರಾಟ್ ಮರುಗಿದ್ದಾರೆ."ಇಂದು ಕ್ರೀಡಾ ಜಗತ್ತಿಗೆ ದುಃಖದ ದಿನ. ವಿಶ್ವದ ಶ್ರೇಷ್ಠ ಕ್ರೀಡಾಪಟುವನ್ನು ನಾವು ಕಳೆದುಕೊಂಡಿದ್ದೇವೆ. ಬ್ರಯಾಂಟ್, ಅವರ ಪುತ್ರಿ ಸೇರಿದಂತೆ ಅಪಘಾತದಲ್ಲಿ ಮೃತಪಟ್ಟ ಎಲ್ಲರ ಕುಟುಂಬಗಳಿಗೆ ಹಾಗೂ ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ,'' ಎಂದು ಉಪ ನಾಯಕ ರೋಹಿತ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ದುಖಃ ವ್ಯಕ್ತಪಡಿಸಿದ್ದಾರೆ.