ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಪ್ರತೀಕ: ಅಪರ ಜಿಲ್ಲಾಧಿಕಾರಿ

 ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಪ್ರತೀಕ: ಅಪರ ಜಿಲ್ಲಾಧಿಕಾರಿ  Kittur Rani Chennamma is a symbol of self-respect: Additional District Magistrate

ಲೋಕದರ್ಶನ ವರದಿ 

ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಪ್ರತೀಕ: ಅಪರ ಜಿಲ್ಲಾಧಿಕಾರಿ  

ಕಾರವಾರ, ಅ.23: ಕಿತ್ತೂರು ರಾಣಿ ಚೆನ್ನಮ್ಮ ಭರತ ಖಂಡದ ಸ್ವಾಭಿಮಾನದ ಪ್ರತೀಕ. ಅವರು ದೇಶಕ್ಕೆ ಸ್ವಾಭಿಮಾನದ ದಿಕ್ಸೂಚಿ ತೋರಿಸಿದ್ದಾರೆ. ಈ ದಿಕ್ಸೂಚಿಯಡಿ ನಾವೆಲ್ಲರೂ ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.   

ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.   

 ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಟ ನಡೆಸಿ ಈಗ 200 ವರ್ಷ ಆಗಿದೆ. ಚೆನ್ನಮ್ಮ ರವರ ಶೌರ್ಯ, ಧೈರ್ಯ, ಹೋರಾಟ, ದೇಶಭಕ್ತಿ ಮತ್ತು ಜೀವನ ಸಂದೇಶವನ್ನು ಎಲ್ಲರೂ ಪಾಲಿಸಬೇಕು. ತನ್ನ ಸಾಮ್ರಾಜ್ಯದ ಜನರನ್ನು ಒಗ್ಗೂಡಿಸಿ, ಸೈನ್ಯ ಕಟ್ಟಿ, ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚೆನ್ನಮ್ಮ, ಪರಿಸ್ಥಿತಿ ಬಂದರೆ ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದವಾಗಿರಬೇಕು ಎಂಬ ಸಂದೇಶವನ್ನು ನೀಡಿದ ವೀರ ರಾಣಿ. ಯುವಪೀಳಿಗೆ ಮಹಾನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಿಕ್ಕ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು.   

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಯಮುನಾ ಗಾಂವಕರ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ಕತ್ತಿವರಸೆ, ಬಿಲ್ಲುಗಾರಿಕೆಯ ತರಬೇತಿ ಪಡೆದಿದ್ದರು. ನಿರಂತರವಾದ ಒಳ್ಳೆಯ ಅಭ್ಯಾಸಗಳು ನಮ್ಮನ್ನು ಉತ್ತಮಗೊಳಿಸುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ ಅವರು ಸಾಹಸ, ಶೌರ್ಯ, ಧೈರ್ಯ, ದೇಶಪ್ರೇಮದ ಪ್ರತಿರೂಪ. ಅವರಂತೆ ಎಲ್ಲರೂ ರಾಷಾೊಭಿಮಾನ ಬೆಳೆಸಿಕೊಳ್ಳಬೇಕು ಎಂದರು.   

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸತೀಶ ನಾಯ್ಕ್‌, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಮಾ ನಾಯ್ಕ, ಗೌರವ ಕಾರ್ಯದರ್ಶಿ ಮನೋಜ, ಕಾಲೇಜಿನ ಉಪನ್ಯಾಸಕರಾದ ಮಂಜುನಾಥ ಗುನಗಾ, ಸತೀಶ, ವಿದ್ಯಾರ್ಥಿಗಳು ಮತ್ತಿತರರು ಇದ್ದರು.  

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ವನಿತಾ ಶೇಟ ನಿರೂಪಿಸಿ, ವಂದಿಸಿದರು.  


ಜೇನುಗಾರಿಕೆ ತರಬೇತಿ ; ಅರ್ಜಿ ಆಹ್ವಾನ   

ಕಾರವಾರ 23: ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೀಳಗಿ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ ನವೆಂಬರ್ 4 ರಿಂದ ಫೆಬ್ರವರಿ 3 ರವರೆಗೆ ರೈತ ಮಕ್ಕಳಿಗೆ 3 ತಿಂಗಳ ಜೇನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  

ಆಸಕ್ತರು ಅರ್ಜಿಗಳನ್ನು ತೋಟಗಾರಿಕೆ ಜಂಟಿ ನಿರ್ದೇಶಕರು (ಜಿ.ಪಂ) ಶಿರಸಿ ಅಥವಾ ಹಿರಿಯ ಸಹಾಯ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಕಾರವಾರ ಕಚೇರಿಯಲ್ಲಿ ಅಥವಾ ಇಲಾಖಾ ವೆಬ್ಸೈಟ್ =ನಲ್ಲಿ ಅ.27 ರೊಳಗೆ ಡೌನೌಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ, ತರಬೇತಿ ಅರ್ಹತೆ, ಕರಾರು ಪತ್ರ, ಭದ್ರತಾ ಠೇವಣಿ ಹಾಗೂ ಇತರ ನಿಯಮಗಳ ವಿವರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿರುವ ಸುತ್ತೋಲೆಯಲ್ಲಿ ನೀಡಲಾಗುವುದು.   

ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿಯ 1 ಅಭ್ಯರ್ಥಿ ಹಾಗೂ ಇತರೆ ವರ್ಗದ 2 ಅಭ್ಯರ್ಥಿಗಳನ್ನು ನಿಯಮಾನುಸಾರ ತರಬೇತಿಗೆ ಆಯ್ಕೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವಂತೆ ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಕೌಶ್ಯಲಾಧರಿತ ತರಬೇತಿಗಾಗಿ ಅರ್ಜಿ ಆಹ್ವಾನ  

ಕಾರವಾರ 23: ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 50 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವತಿಯರಿಗಾಗಿ ನವೆಂಬರ್ ತಿಂಗಳಿನಲ್ಲಿ 35 ದಿನಗಳ ಬ್ಯೂಟಿ ಪಾರ್ಲರ್ ಮ್ಯಾನೇಜಮೇಂಟ ಹಾಗೂ 31 ದಿನಗಳ ಮಹಿಳೆಯರಿಗಾಗಿ ಹೊಲಿಗೆ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.  

ತರಬೇತಿ ಅವಧಿಯಲ್ಲಿ ಊಟ ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಕೌಶಲ್ಯ ಸಾಫ್ಟ್‌ ಸ್ಕಿಲ್ಸ್‌, ಯೋಗ ತರಬೇತಿ, ಬ್ಯಾಂಕಿನಿಂದ ಸಾಲ ಪಡೆದು ಸ್ವಉದ್ಯೋಗ ಪ್ರಾಂಭಿಸಲು ಬೇಕಾದ ಜ್ಞಾನ, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನಿತರ ಮಾಹಿತಿಗಳನ್ನು ಉಚಿತವಾಗಿ ನೀಡಲಾಗುವುದು.   

ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಳಾಸಕ್ಕೆ ಸಂಪರ್ಕಿಸಲು ಹಾಗೂ ಸಂಸ್ಥೆಯ ವಾಟ್ಸಾಪ್ ನಂಬರ್ 9483485489 ಗೆ ಹಾಯ್ ಎಂದು ಸಂದೇಶ ಕಳುಹಿಸುವದರ ತಮ್ಮ ಹೆಸರು ನೋಂದಣಿಯಿಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಅ.31 ಕೊನೆಯ ದಿನವಾಗಿದೆ.  

  


ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ  

ಕಾರವಾರ 23: ಬೆಂಗಳೂರು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನವೆಂಬರ್ 13 ರಿಂದ 31 ದಿನಗಳ ಕಾಲ ನಿರುದ್ಯೋಗಿ ಪುರುಷರಿಗೆ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.  

ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 45 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಶಿಬಿರದ ಸಮಯದಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.  

ಆಸಕ್ತ ಅಭ್ಯರ್ಥಿಗಳು ಅ.31 ರಂದು ಬೆಳಗ್ಗೆ 10 ಗಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗಬೇಕು.