ಅತಿ ವೇಗವಾಗಿ 11 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ನಾಯಕ ಕಿಂಗ್ ಕೊಹ್ಲಿ !

ಪುಣೆ, ಜ 11, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಬೇಟೆ ಮುಂದುವರಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 11,000 ರನ್ ಗಳಿಸಿದ ವಿಶ್ವದ ಮೊದಲ ನಾಯಕ ಎಂದು ಸಾಧನೆಗೆ ಭಾಜನರಾಗಿದ್ದಾರೆ.ಶ್ರೀಲಂಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.ಆ ಮೂಲಕ 169ನೇ ಇನಿಂಗ್ಸ್ ನಲ್ಲಿ ನಾಯಕ ಕೊಹ್ಲಿ, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದರು. ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ವಿಶ್ವದ ಆರನೇ ಹಾಗೂ ಭಾರತದ ಎರಡನೇ ನಾಯಕರಾಗಿದ್ದಾರೆ. ಈ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಲಿಗೆ ಸೇರ್ಪಡೆಯಾದರು. ರಿಕಿ ಪಾಂಟಿಂಗ್, ಗ್ರೇಮ್ ಸ್ಮಿತ್, ಅಲಾನ್ ಬಾರ್ಡರ್ ಮತ್ತು ಫ್ಲೆಮಿಂಗ್ ಇದೇ ಪಟ್ಟಿಯಲ್ಲಿದ್ದಾರೆ.ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಅಚ್ಚರಿಯೆಂಬಂತೆ ಆರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ವಿರಾಟ್ ಕೊಹ್ಲಿ ರನೌಟ್ ಬಲೆಗೆ ಸಿಲುಕಿಸಿದರು. ಆದಾಗ್ಯೂ ವಿರಾಟ್ 17 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ಕಳೆದ ಪಂದ್ಯದಲ್ಲಷ್ಟೇ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಾಯಕರಾಗಿ ಅತಿ ವೇಗದಲ್ಲಿ 1000 ರನ್ ಮೈಲುಗಲ್ಲು ತಲುಪಿದ ಆಟಗಾರ ಎಂಬ ಹಿರಿಮೆಗೆ ಭಾಜವಾದರು. ಅದೇ ಪಂದ್ಯದಲ್ಲಿ ಟಿ-20 ಕ್ರಿಕೆಟ್ ನಲ್ಲಿ  ಅತಿ ಹೆಚ್ಚು ರನ್ ಗಳಿಸಿದ್ದ ಸಹ ಆಟಗಾರ ರೋಹಿತ್ ಶರ್ಮಾ ದಾಖಲೆಯನ್ನು  ಕೊಹ್ಲಿ ಹಿಂದಿಕ್ಕಿದ್ದರು.