ಪ್ಯಾಂಗ್ಯಾಂಗ್ನಲ್ಲಿ ಟ್ರಂಪ್ ಭೇಟಿಗೆ ಕಿಮ್ ಜಾಂಗ್ ಉತ್ಸುಕ

ಟೋಕಿಯೊ,  ಸೆ 16       ಉತ್ತರ ಕೊರಿಯಾದ ಅಧಿನಾಯಕ ಕಿಮ್- ಜಾಂಗ್- ಉನ್ ಅವರು ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ಯಾಂಗ್ಯಾಂಗ್ ನಲ್ಲಿ ಭೇಟಿಯಾಗುವ ಕುರಿತು  ಪ್ರಸ್ತಾಪಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮ ವರದಿ ಮಾಡಿದೆ. 

ಈ ಪ್ರಸ್ತಾಪವನ್ನು  ಒಳಗೊಂಡ ಪತ್ರವನ್ನು ಕಿಮ್- ಜಾಂಗ್- ಉನ್ ಅವರು ಕಳೆದ ತಿಂಗಳ ದ್ವಿತೀಯಾರ್ಧದಲ್ಲಿ  ಟ್ರಂಪ್ಗೆ ರವಾನಿಸಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಜೂನ್ಗಾಂಗ್ ಇಲ್ಬೊ ಪತ್ರಿಕೆ ಸೋಮವಾರ ವರದಿ ಮಾಡಿದೆ.  

ಈ ವರ್ಷ ಕಿಮ್ ಅವರನ್ನು ಯಾವುದಾದರೂ ಒಂದು ವೇಳೆ ಭೇಟಿಯಾಗುವುದಾಗಿ ಕಳೆದ ವಾರ  ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದರು.  

ಸೆಪ್ಟೆಂಬರ್  ದ್ವಿತೀಯಾರ್ಧದಲ್ಲಿ ಅಮೆರಿಕದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ಉತ್ತರ ಕೊರಿಯಾದ  ಸರ್ಕಾರ ಇಂಗಿತ ವ್ಯಕ್ತಪಡಿಸಿದೆ. ಇದೇ ವೇಳೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಗಳನ್ನು ಎಂದಿನಂತೆ ನಡೆಸುತ್ತಿದೆ. 

ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ಮಾತುಕತೆ ಸ್ಥಗಿತಗೊಂಡಿರುವ ನಡುವೆಯೇ  

ಕೊರಿಯಾದ ಪರ್ಯಾಯ  ದ್ವೀಪದಲ್ಲಿನ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ನಿರ್ಬಂಧಗಳ ಕುರಿತು ಅಮೆರಿಕ ಮೃದು ನಿಲುವು ತಾಳಬೇಕು ಎಂದು ಕಿಮ್ ಜಾಂಗ್ ಉನ್ ಬಯಸುತ್ತಾ ಬಂದಿದ್ದಾರೆ.  

ಟ್ರಂಪ್ ಮತ್ತು ಕಿಮ್ ಜೂನ್ 2018 ರಿಂದ ಮೂರು ಸಭೆಗಳನ್ನು ನಡೆಸಿದ್ದಾರೆ. ಈ ಮಾತುಕತೆಗಳನ್ನು ಐತಿಹಾಸಿಕವೆಂದೇ ಪರಿಗಣಿಸಲಾಗಿದೆ.