ಮಂಗಳೂರು, ಜ 29, ಮಾಜಿ ಸಚಿವ ಯು.ಟಿ. ಖಾದರ್ ಆಪ್ತನೋರ್ವ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ, ವಿದ್ಯುತ್ ಬಿಲ್ ಕೊಡಲು ತೆರಳಿದ್ದಾಗ ಖಾದರ್ ಅವರ ಆಪ್ತ ಅಮೀರ್ ಹುಸೇನ್ ಮೂವರು ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾಹಿತಿ ಪಡೆಯಲು ಬಂದಿದ್ದಾರೆ ಎಂದು ಶಂಕಿಸಿ ಅಮೀರ್ ಹುಸೇನ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮೆಸ್ಕಾಂ ಸಿಬ್ಬಂದಿ ರಂಗನಾಥ್, ಸಂದೇಶ್ ಕುಮಾರ್, ಮಧು ಮೇಲೆ ಹಲ್ಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.