ನವದೆಹಲಿ, ಏ 7, ಮಾರಾಣಾಂತಿಕ ಕೊರೋನಾ ವೈರಸ್ ಸೋಂಕನ್ನು ಸದೆಬಡಿಯಲು ದೆಹಲಿ ಸರ್ಕಾರ '5ಟಿ ಯೋಜನೆ'ಯನ್ನು ಸಿದ್ಧಪಡಿಸಿದೆ. ಈ ಕುರಿತು ಡಿಜಿಟಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್, ಎಲ್ ಎನ್ ಜೆಪಿ ಆಸ್ಪತ್ರೆ, ಜಿಬಿ ಪಂತ್ ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಗಳನ್ನು ಕೋವಿಡ್-19 ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. 5 ಟಿ ಯೋಜನೆಯೆಂದರೆ, ಪರೀಕ್ಷೆ, ಪತ್ತೆ ಹಚ್ಚುವುದು, ಚಿಕಿತ್ಸೆ, ತಂಡದ ಕೆಲಸ ಮತ್ತು ನಿರ್ವಹಣೆ. (ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್, ಟೀಮ್ ವರ್ಕ್ ಮತ್ತು ಟ್ರ್ಯಾಕಿಂಗ್ ಆ್ಯಂಡ್ ಮಾನಿಟರಿಂಗ್ ) ದೆಹಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದರು. ಕೊರೋನಾ ಸೋಂಕಿನ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ಯೋಜನೆ ರೂಪಿಸಲಾಗಿದೆ ಎಂದರು. ಸದ್ಯ ದೆಹಲಿಯಲ್ಲಿ 2950 ಆಸ್ಪತ್ರೆಯ ಬೆಡ್ ಗಳು ಕೊರೋನಾ ರೋಗಿಗಳಿಗೆ ಮೀಸಲಾಗಿವೆ. ಉಳಿದಂತೆ ಮೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದರು.