ಪಶುಪಾಲನೆ "ಸ್ವಾತಂತ್ರ್ಯ" ಬಹಳ ತೂಕ ಹೊಂದಿರುವ ಹಾಗೂ ಅವಶ್ಯಕತೆಯುಳ್ಳ ಒಂದು ರೀತಿಯ ಅವಕಾಶ. ಸ್ವಾತಂತ್ರ್ಯವಿಲ್ಲದೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುವುದು ಅಸಾಧ್ಯ. ಅದು ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣಕ್ಕೆ, ಉತ್ತಮ ಸಮಾಜದ ಅಸ್ತಿತ್ವಕ್ಕೆ ಮೂಲ ಬುನಾದಿಯಾಗಿದೆ. ಸದೃಢ ದೇಶವನ್ನು ಕಟ್ಟುವಲ್ಲಿಯೂ ಸ್ವಾತಂತ್ರ್ಯದ ಪಾತ್ರ ಮುಖ್ಯ. ಇಂತಹ ಅಮೂಲ್ಯವಾದ ವರವನ್ನು ನಾವು ಪಡೆದುಕೊಂಡಿದ್ದು 1947 ರ ಆಗಸ್ಟ್ 15 ರಂದು..
ಆಗಸ್ಟ್ 15 ಭಾರತೀಯರಿಗೆ ವಿಶೇಷವಾದ ದಿನ. ಬ್ರಿಟಿಷರ ಆಳ್ವಿಕೆಯ ಕಪಿಮುಷ್ಠಿಯಿಂದ ಭಾರತೀಯರು ಹೊರಬಂದು ದೇಶಭಕ್ತಿಯನ್ನು ಗೆಲ್ಲಿಸಿದ ದಿನ. ದೇಶದಾದ್ಯಂತ ಪ್ರತಿ ವರ್ಷವೂ ನಾವು ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ದೇಶಕ್ಕಾಗಿ ಪ್ರಾಣ ತೆತ್ತ ಅನೇಕ ಮಹನೀಯರನ್ನು ನೆನೆಯುತ್ತೇವೆ.
ದೇಶದ ಈ ಅಭೂತಪೂರ್ವ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾನ್ ವ್ಯಕ್ತಿಗಳು ಶ್ರಮಿಸಿದ್ದಾರೆ. ಅಂತಹವರಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಗಂಗಾಧರರಾವ್ ದೇಶಪಾಂಡೆ ಒಬ್ಬರು.
"ಕರ್ನಾಟಕದ ಸಿಂಹ" ಎಂದೇ ಖ್ಯಾತರಾದ ಗಂಗಾಧರರಾವ್ ಬಾಲಕೃಷ್ಣ ದೇಶಪಾಂಡೆಯವರು ಮಾರ್ಚ್ 31, 1871 ರಲ್ಲಿ ಹುದಲಿಯಲ್ಲಿ ಜನಿಸಿದರು. ಅವರ ತಂದೆ ಬಾಲಕೃಷ್ಣ ಇನಾಮದಾರರಾಗಿದ್ದರು. ಅವರು ತಮ್ಮ ರಾಜಕೀಯ ಪಾಠಗಳನ್ನು ಲೋಕಮಾನ್ಯ ತಿಲಕರ ಬಳಿ ಕಲಿತರು. ಗಾಂಧೀಜಿಯವರ ವಿಶ್ವಾಸಾರ್ಹ ವೈಯಕ್ತಿಕ ಶಿಷ್ಯರಲ್ಲಿ ಇವರೂ ಒಬ್ಬರು.
ದೇಶಪಾಂಡೆಯವರು ತಮ್ಮ ವೃತ್ತಿಜೀವನವನ್ನು ವಕೀಲರಾಗಿ ಆರಂಭಿಸಿದರು. ಆರು ವರ್ಷಗಳ ಕಾಲ ಅವರು ಬೆಳಗಾವಿ ಪುರಸಭೆಯ ಉಪಾಧ್ಯಕ್ಷರಾಗಿದ್ದರು ದೇಶಭಕ್ತಿ ಹಾಗೂ ನಾಗರಿಕ ಜವಾಬ್ದಾರಿಗಳ ಕುರಿತು ಜನರಿಗೆ ತರಬೇತಿ ನೀಡಿದರು.
ವಿಭಜನೆಯ ದಿನಗಳಲ್ಲಿ ಅವರು ಅನೇಕ ಪ್ರಾಂತೀಯ ಸಮ್ಮೇಳನಗಳನ್ನು ಆಯೋಜಿಸಿದರು. ಹೋರಾಟದ ಸಮಯದಲ್ಲಿ ಅವರು ಮೂರು ಬಾರಿ ಜೈಲು ವಾಸ ಅನುಭವಿಸಿದರು.
ಸ್ವದೇಶಿ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬ್ರಿಟಿಷರ ವಸ್ತುಗಳನ್ನು ಬಹಿಷ್ಕರಿಸಿ, ದೇಶಿ ವಸ್ತುಗಳಿಗೆ ಪ್ರಾಮುಖ್ಯತೆ ನೀಡುವಂತೆ ಜನರನ್ನು ಹುರಿದುಂಬಿಸಿದರು. ಗೋವಿಂದರಾವ್ ಯಾಳಗಿ ಅವರ ನಿವಾಸದಲ್ಲಿ ಮೊದಲ ಸಾರ್ವಜನಿಕ ಗಣೇಶೋತ್ಸವವನ್ನು ಮೊದಲ ಬಾರಿಗೆ ಬೆಳಗಾವಿಯಲ್ಲಿ ಆಚರಿಸಿದರು.
ಅಲ್ಲದೇ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಸಂಘದ ಅಧ್ಯಕ್ಷರಾಗಿದ್ದರು. ಮಹಾತ್ಮಾ ಗಾಂಧಿ ನೇತೃತ್ವದ ಅಖಿಲ ಭಾರತ ಸ್ಪಿನ್ನರ್ ಗಳ ಸಂಘದ ಟ್ರಸ್ಟಿಯಾಗಿದ್ದರು.
ಗಂಗಾಧರರಾವ್ ದೇಶಪಾಂಡೆ ಕೆಪಿಸಿಸಿಯ ಮೊದಲ ಅಧ್ಯಕ್ಷರಾಗಿದ್ದರು. ಅವರು 1923 ರಲ್ಲಿ ಜವಾಹರಲಾಲ್ ನೆಹರು ಮತ್ತು ಸೈಫುದ್ದೀನ್ ಕಿಚ್ಲೆವ್ ಅವರೊಂದಿಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಅವರು 1931-32ರ ಅವಧಿಯಲ್ಲಿ ಎಐಸಿಸಿ (5 ನೇ ಸರ್ವಾಧಿಕಾರಿ) ಅಧ್ಯಕ್ಷರಾಗಿದ್ದರು. ಅವರು ಹಲವು ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.ಭಾರತದ ಸ್ವಾತಂತ್ರ್ಯಕ್ಕಾಗಿ 60 ವರ್ಷಗಳ ಕಾಲ ಹೋರಾಡಿದರು (1887 ರಿಂದ 1947). ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅವರು ಕರ್ನಾಟಕ ಏಕೀಕರಣಕ್ಕಾಗಿ ಕೆಲಸ ಮಾಡಿದರು.
ದೇಶಪಾಂಡೆ ಅವರು ಅಸಹಕಾರ ಚಳುವಳಿಯನ್ನು ಬೆಂಬಲಿಸಿದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಆಯೋಜನೆಯ ಹೊಣೆ ಹೊತ್ತವರು ದೇಶಪಾಂಡೆಯವರು.
1947 ರ ನಂತರ, ದೇಶಪಾಂಡೆ ಅವರು ಆರ್.ಡಿ. ರಾನಡೆ, ಸಂತ ಮತ್ತು ಪ್ರತಿಷ್ಠಿತ ತತ್ವಜ್ಞಾನಿಗಳ ಸೌಮ್ಯ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಅನ್ವೇಷಣೆಗಳಿಗೆ ತಮ್ಮನ್ನು ತೊಡಗಿಸಿಕೊಂಡರು. ನಿಜವಾದ ಆಂತರಿಕ ಶಾಂತಿ ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಮಾತ್ರ ಅಡಗಿದೆ ಎಂದು ಅವರಿಗೆ ಮನವರಿಕೆಯಾಯಿತು. ಅವರು ಹುದಲಿಯಲ್ಲಿ ಮೊದಲ ಖಾದಿ ಕೇಂದ್ರವನ್ನು ಆರಂಭಿಸಿದ ನಂತರ ಅವರನ್ನು "ಕರ್ನಾಟಕದ ಖಾದಿ ಭಗೀರಥ" ಎಂದು ಕರೆಯಲಾಗುತ್ತದೆ. ಇದು ಇಡೀ ದಕ್ಷಿಣ ಭಾರತದ ಮೊದಲ ಖಾದಿ ಕೇಂದ್ರವಾಗಿತ್ತು. ಅವರು ಹುದಲಿಯಲ್ಲಿ ಕುಮಾರಿ ಆಶ್ರಮವನ್ನು ಪ್ರಾರಂಭಿಸಿದರು ಮತ್ತು ಜಿ.ನಾರಾಯಣ್ ಅವರಂತಹ ಅನೇಕ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಕುಮಾರಿ ಆಶ್ರಮದಲ್ಲಿ ತರಬೇತಿ ಪಡೆದರು.
ಅವರು ದೈನಂದಿನ ಪತ್ರಿಕೆಗಳಾದ ಧುರೀಣ (ಕನ್ನಡ), ರಾಷ್ಟ್ರಮತ (ಮರಾಠಿ- ಮುಖ್ಯ ಸಂಪಾದಕರಾಗಿ ಕೆಲಸ ಮಾಡಿದರು) ಮತ್ತು ಲೋಕಮಾನ್ಯ (ಮರಾಠಿ) ಸ್ಥಾಪಿಸಿದರು. ಅವರು ಕನ್ನಡದ ಪ್ರಮುಖ ದಿನಪತ್ರಿಕೆ ಸಂಯುಕ್ತ ಕರ್ನಾಟಕವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶಪಾಂಡೆಯವರು 30 ಜುಲೈ 1960 ಇಹ ಲೋಕ ತ್ಯಜಿಸಿದರು.
ಗಂಗಾಧರರಾವ್ ಅವರ ಕೊಡುಗೆಯನ್ನು ಸ್ಮರಿಸಲು ಬೆಳಗಾವಿಯ ರಾಮತೀರ್ಥನಗರದಲ್ಲಿ ಬಹುಕೋಟಿ ವೆಚ್ಚದಲ್ಲಿ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣವಾಗಲಿದೆ. ಇಂತಹ ಮಹಾನ್ ಹೋರಾಟಗಾರ ನಮ್ಮ ಜಿಲ್ಲೆಯವರಾಗಿರುವುದು ನಮ್ಮೆಲ್ಲರ ಹೆಮ್ಮೆ.
ಹಾಗಿದ್ದರೆ, ಈಗ ನಾವು ಯೋಚನೆ ಮಾಡಬೇಕಿರುವುದು ಯುವಜನತೆಯಾಗಿ ನಮ್ಮ ಪಾತ್ರದ ಬಗ್ಗೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ವೈಯಕ್ತಿಕ ಆಸೆ, ಕನಸುಗಳನ್ನು ಬದಿಗೊತ್ತಿ, ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ, ತಮ್ಮ ಪ್ರಾಣ ನೀಡಿದ್ದಾರೆ. ಆಧುನಿಕತೆಯ ಜೋಳಿಗೆಗೆ ಜೋತು ಬಿದ್ದಿರುವ ಇಂದಿನ ಪೀಳಿಗೆ ದೇಶಭಕ್ತಿ, ದೇಶಪ್ರೇಮಗಳನ್ನು ಬೇರೆ ರೀತಿಯಲ್ಲಿ ಮೈಗೂಡಿಸಿಕೊಳ್ಳಬೇಕಿದೆ.
ಕೇವಲ ವಾಟ್ಸಪ್ ಸ್ಟೇಟಸ್, ಫೇಸ್ಬುಕ್,ಟ್ವಿಟರ್ ಗಳಿಗೆ ದೇಶಪ್ರೇಮ ಸೀಮಿತವಾಗಿ ಬಿಟ್ಟಿದೆ. ದೇಶಪ್ರೇಮ ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳು ವೇದಿಕೆಗಳು ಅಷ್ಟೇ. ಪ್ರಾಯೋಗಿಕವಾಗಿ ಯೋಚಿಸಿದರೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆಷ್ಟು ತಿಳಿದಿದೆ? ನಾವು ವಾಸಿಸುವ ಪ್ರದೇಶ ದೇಶದ ಹೋರಾಟದ ಸಮಯದಲ್ಲಿ ನೀಡಿದ ಕೊಡುಗೆ ಏನು? ಇಂತಹ ಅನೇಕ ಪ್ರಶ್ನೆಗಳಿಗೆ ಇಂದು ಎಷ್ಟೋ ಜನರಲ್ಲಿ ಉತ್ತರವಿಲ್ಲ.
ದೇಶದ ನಾಗರಿಕರಾಗಿ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಬಗ್ಗೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಗಮನಿಸಿ, ಇಂದಿನ ಮಕ್ಕಳು ಸೋ ಕಾಲ್ಡ್ ಶಾಲೆಗಳಲ್ಲಿ ಇಂಗ್ಲಿಷ್ ರೈಮ್ಸ್ ಗಳನ್ನ ಸಲೀಸಾಗಿ ಹೇಳುತ್ತಾರೆ. ಟ್ವಿಂಕಲ್ ....ಟ್ವಿಂಕಲ್.... ಲಿಟಲ್ ಸ್ಟಾರ್.... ಅಂತ. ಇದರ ಜೊತೆಗೆ ಸಾರೇ ಜಹಾಸೇ ಅಚ್ಛಾ ಹಿಂದುಸ್ತಾನ್ ಹಮಾರಾ ......ಗೀತೆ ಕೂಡ ಸೇರಿದರೆ ಮುಂದೆ ಒಂದು ದಿನ ದೇಶಭಕ್ತಿಯ ಭಾವನೆಯನ್ನು ಒತ್ತಾಯಪೂರ್ವಕವಾಗಿ ಬೆಳೆಸುವ ಅನಿವಾರ್ಯತೆಯನ್ನು ತಪ್ಪಿಸಬಹುದು ಅಲ್ಲವೇ?
ಸಿನಿಮಾ ಹಾಡುಗಳ ಹಾವಳಿಯ ಮಧ್ಯೆ ದೇಶಭಕ್ತಿ ಗೀತೆಗಳ ಗಾನ ಮೊಳಗಬೇಕಿದೆ. ಕೇವಲ ಇಂಟರ್ನೆಟ್ ಗೆ ಸೀಮಿತವಾಗಿರುವ ಕೆಲಸಗಳು ಪ್ರಾಕ್ಟಿಕಲ್ ಆಗಿ ಕಾರ್ಯರೂಪಕ್ಕೆ ಬರಬೇಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ವೀರರ ಜೀವನ ಚರಿತ್ರೆ ನಮ್ಮ ಪಠ್ಯದಲ್ಲಿರಬೇಕಿದೆ. ಕೇವಲ ಪ್ರಮುಖರಷ್ಟೇ ಅಲ್ಲದೇ, ತೆರೆಯ ಮರೆಯಲ್ಲಿ ದುಡಿದ ದೇಶಭಕ್ತರ ಕುರಿತು ಸಂಶೋಧನೆಯಾಗಬೇಕಿದೆ.
ಸ್ವಾತಂತ್ರ್ಯ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ, ಜೀವನದ ಭಾಗವಾಗಬೇಕು. ನಾವು ನಮ್ಮ ಕೈಲಾದಷ್ಟು ಸಮಾಜದ ಸೇವೆ ಮಾಡಬೇಕು. ದೇಶದ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಬೆಳವಣಿಗೆ ಬಗ್ಗೆ ಯೋಚಿಸುವುದರ ಜೊತೆಗೆ ದೇಶಕ್ಕೆ ನಮ್ಮ ಕೊಡುಗೆಯ ಕುರಿತು ಸಹ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗಂಗಾಧರ್ ದೇಶಪಾಂಡೆಯವರ ಜೀವನ ನಮಗೆ ಮಾದರಿಯಾಗಬೇಕು. ಅವರ ನಿಸ್ವಾರ್ಥ ಜೀವನ, ದೇಶಪ್ರೇಮ ನಮಗೆ ಆದರ್ಶವಾಗಬೇಕು.
ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಕಲೆಯನ್ನು ಗೌರವಿಸಿ, ಅವುಗಳನ್ನು ಉಳಿಸಿ, ಬೆಳೆಸುತ್ತೇವೆ ಎಂಬ ಒಂದು ಪ್ರತಿಜ್ಞೆ ಯನ್ನು ನಾವು ಮಾಡಬೇಕಿದೆ. ನೀವು ಮಾಡುತ್ತಿರಲ್ಲವೇ?
ಸವಿತಾ ಬ. ಪಾಟೀಲ
ಪ್ರಶಿಕ್ಷಣಾರ್ಥಿ, ಬೆಳಗಾವಿ