ಬೆಳಗಾವಿ 19: ಜಗತ್ತಿನಲ್ಲಿ ಪ್ರತಿಯೊಬ್ಬರು ತಪ್ಪು ಮಾಡುವುದು ಸಹಜ, ಆದರೆ ಮಾಡಿದ ತಪ್ಪನ್ನು ಪುನರಾವರ್ತಿಸದೇ ಉತ್ತಮ ಪ್ರಜೆಗಳಾಗಿ ಬಾಳಬೇಕು. ಮಾಡಿದ ತಪ್ಪಿಗೆ ಪ್ರಾಯಶ್ಚಿತವೇ ನಿಜವಾದ ಶಿಕ್ಷೆ. ಮಾನವ ಜನ್ಮ ಬಹಳ ದೊಡ್ಡದು ಅದನ್ನು ವ್ಯರ್ಥ ಮಾಡಬೇಡಿ ಎಂದು ಅಡವಿ ಸಿದ್ದರಾಮ ಸ್ವಾಮಿಜಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಹಾಗೂ ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆ ಜಿಲ್ಲಾ ಕಾರ್ಯಾಲಯ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ದಿ.17ರಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಹಾಗೂ ಮನಃಪರಿವರ್ತನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನದಲ್ಲಿ ಮಾತನಾಡಿದರು.
ಕಾರಾಗೃಹವನ್ನು ಸಾಧನೆಯ ಕ್ಷೇತ್ರ ಎಂದು ಭಾವಿಸಿ ಇಲ್ಲಿರುವ ಸಮಯವನ್ನು ಉತ್ತಮ ಕಾರ್ಯಕ್ಕಾಗಿ ಬಳಸಿ, ತಾವೆಲ್ಲ ಧನಾತ್ಮಕ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಿಡುಗಡೆ ನಂತರ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು. ಅಲ್ಲದೇ ಮುಂದಿನ ದಿನಗಳಲ್ಲಿ ತಮ್ಮ ಮಠದ ವತಿಯಿಂದ ಹಾಗೂ ಮಠದ ಭಕ್ತರಿಂದ ಕಾರಾಗೃಹ ನಿವಾಸಿಗಳ ಶ್ರೇಯೋಭಿವೃದ್ಧಿಗಾಗಿ ಸಹಕಾರ ನೀಡಲಾಗುವುದು ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಹೈಕೋರ್ಟ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ತಾವೆಲ್ಲ ತಮ್ಮ ಜೀವನದ ಕಹಿ ಘಳಿಗೆಯಲ್ಲಿ ತಿಳಿದೋ ಅಥವಾ ತಿಳಿಯದೇ ತಪ್ಪು ಮಾಡಿ ಶಿಕ್ಷೆ ಅನುಭವಿಸತ್ತಿರಬಹುದು. ಆದರೆ ಇದು ಕೇವಲ ತಾತ್ಕಾಲಿಕ ಮಾತ್ರ. ಇಲ್ಲಿಂದ ತಾವು ಬಿಡುಗಡೆಯಾಗಿ ಹೋಗಲೆಬೇಕು. ಹಾಗೇ ತಾವು ಇನ್ನುಮುಂದೆ ಜೀವನದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬಾಳುತ್ತೇನೆ ಎಂಬ ಧೃಢನಿರ್ಧಾರ ಮಾಡಬೇಕು. ಶಾಂತಿ, ಪ್ರೀತಿ, ತಾಳ್ಮೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದ್ವೇಷ, ಅಸೂಯೆಯಿಂದ ದೂರವಿರಬೇಕು. ಕಾರಣ ತಾವೆಲ್ಲ ಗತಿಸಿಹೋದ ಕಾಲದ ಬಗ್ಗೆ ಚಿಂತಿಸಬಾರದು ಎಂದು ಹೇಳಿದರು. ಅಲ್ಲದೇ ಕಾನೂನಿನ ಬಗ್ಗೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ತಿಳಿಸಿದರು. ಹಾಗೂ ಬಿಡುಗಡೆ ನಂತರ ಸಮಾಜದಲ್ಲಿ ಸಜ್ಜನರ ಸಂಗ ಮಾಡಿ ತಮ್ಮ ಕುಟುಂಬದವರೊಂದಿಗೆ ಹಾಗೂ ಇತರರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನ್ಯಾಯಾಧೀಶ ಮುರಳಿ ಮೋಹನ ರೆಡ್ಡಿ ಮಾತನಾಡಿ ಕಾನೂನು ಪ್ರಾಧಿಕಾರವು ನಿವಾಸಿಗಳಿಗೆ ಸರ್ವೋಚ್ಛ ನ್ಯಾಯಾಲಯದವರೆಗೂ ಎಲ್ಲ ರೀತಿಯ ಕಾನೂನು ನೆರವುಗಳನ್ನು ಉಚಿತವಾಗಿ ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಸಂಘ-ಸಂಸ್ಥೆಗಳು ನಿವಾಸಿಗಳ ಬಿಡುಗಡೆಗಾಗಿ ಹಾಗೂ ಶ್ರೇಯೋಭಿವೃದ್ಧಿಗಾಗಿ ಸಹಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿಗಳು ಹಾಗೂ ಮಾನವ ಹಕ್ಕುಗಳ ಸಂಸ್ಥೆಯ ಕಾರ್ಯದರ್ಶಿ ಸದಾನಂದ ಎಮ್. ಪಾಟೀಲ ಮಾತನಾಡಿ ಸಂಸ್ಥೆಯ ವತಿಯಿಂದ ಕಾರಾಗೃಹದ ಬಂಧಿಗಳ ಬಿಡುಗಡೆಗಾಗಿ ಹಾಗೂ ಪ್ರಗತಿಗಾಗಿ ಬರುವ ದಿನಗಳಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕ ವ್ಹಿ. ಕೃಷ್ಣಮೂರ್ತಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರ, ಬಿ.ಜಿ. ಧಾರವಾಡ, ಆರ್.ಬಿ. ಪಾಟೀಲ, ಎಸ್.ಬಿ. ಪಾಟೀಲ, ಪರಿಮಳಾ ಹಂಪಣ್ಣವರ, ಜೈಲರಗಳಾದ ರಾಜೇಶ ಧರ್ಮಟ್ಟಿ, ಆರ್. ಬಿ. ಕಾಂಬಳೆ ಉಪಸ್ಥಿತರಿದ್ದರು. ಕಾರಾಗೃಹದ ಉಪಾಧ್ಯಯ ಶಶಿಕಾಂತ ಯಾದಗುಡೆ ನಿರೂಪಿಸಿ ವಂದಿಸಿದರು.