ಹಾವೇರಿ: ತಾಯಿ ಹಾಲು ಹಾಗೂ ರಕ್ತ ಅತ್ಯಂತ ಶ್ರೇಷ್ಠವಾದವುಗಳು. ರಕ್ತವನ್ನು ದಾನದಿಂದ ಮಾತ್ರ ಪಡೆಬಹುದಾಗಿದೆ. ಇಂದಿನ ಯುವ ಪೀಳಿಗೆ ಸ್ವಯಂ ಪ್ರೇರಿತರವಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಹೇಳಿದರು.
ನಗರದ ಜಿ.ಎಚ್.ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಹಾವೇರಿ ಜಿಲ್ಲೆಯ ಎಲ್ಲ ಪದವಿ ಮತ್ತು ವೃತ್ತಿಪರ ಕಾಲೇಜುಗಳು, ಎನ್.ಎಸ್.ಎಸ್. ಮತ್ತು ರೆಡ್ ರಿಬ್ಬನ್ ಕ್ಲಬ್ಗಳು, ಜಿ.ಎಚ್.ಕಾಲೇಜು, ಭಾರತೀಯ ರೆಡ್ ಕ್ರಾಸ್ ಹಾಗೂ ಇತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತಕ್ಕೆ ಯಾವುದೇ ಜಾತಿ-ಧರ್ಮ ಎಂಬ ಬೇಧಭಾವವಿಲ್ಲ. ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು ಹಾಗೂ ಅನೇಕ ಕಾಯಿಲೆಗಳು ದೂರವಾಗುತ್ತವೆ.
ರಕ್ತ ದಾನ ಮಾಡಿದಂತೆ ದೇಹದಲ್ಲಿ ಮತ್ತೆ ಮತ್ತೆ ರಕ್ತ ಉತ್ಪತ್ತಿಯಾಗುತ್ತದೆ. ಯುವ ಸಮೂಹ ರಕ್ತದಾನಕ್ಕೆ ಮುಂದಾದರೆ ಜಿಲ್ಲೆಯಲ್ಲಿ ಅವಶ್ಯಕತೆ ಇರುವ ರಕ್ತದ ಕೊರತೆ ನೀಗಿಸಬಹುದು ಎಂದು ಹೇಳಿದರು.
ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ ಅವರು ಮಾತನಾಡಿ, ಸಂಬಂಧಿಕರಿಗೆ ಮಾತ್ರ ರಕ್ತದಾನ ಮಾಡದೇ ರಕ್ತದ ಅವಶ್ಯಕತೆ ಇರುವ ಎಲ್ಲರಿಗೂ ರಕ್ತದಾನ ಮಾಡಲು ಮುಂದಾಗಬೇಕು.
ರಕ್ತದಾನ ಮಾಡಲು ಸದೃಢರಾಗಿರಬೇಕು ಹಾಗಾಗಿ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅತೀ ಹೆಚ್ಚುಬಾರಿ ರಕ್ತದಾನ ಮಾಡಿದ ಬಸವರಾಜ ಯರಗೊಂಡ, ಸದಾನಂದ ಆರೇರ, ಇ.ಬಿ.ಸೆಡಂಬಕರ, ಡಾ.ಚನ್ನಪ್ಪಗೌಡರ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಶಾಸಕರಾದ ನೆಹರು ಓಲೇಕಾರ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಆಡೂರ ಗ್ರಾಮದ ರಕ್ತದಾನ ಗೆಳೆಯರ ಬಳಗದ ವತಿಯಿಂದ ರಕ್ತದಾನ ಜಾಗೃತಿ ನಾಟಕ ಪ್ರದಶರ್ಿಸಲಾಯಿತು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಲೇಶ ಎಂ.ಎನ್.ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ರಕ್ತಭಂಡಾರ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ, ತಾಲೂಕ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಜಿಲ್ಲಾ ಮೇಲ್ವಿಚಾರಕ ಸುರೇಶ ಹೊಸಮನಿ, ಜಿ.ಎಚ್.ಕಾಲೇಜು ಪ್ರಾಂಶುಪಾಲರಾದ ಟಿ.ವಿ.ಚವ್ಹಾಣ, ಎಚ್.ಎಂ.ಖತೀಬ್ ಹಾಗೂ ಇತರರು ಉಪಸ್ಥಿತರಿದ್ದರು.