ಕನ್ನಡ ಭಾಷೆ ಬದುಕು ಕಟ್ಟಿಕೊಡುವ ಭಾಷೆ: ತಹಸಿಲ್ದಾರ್ ಹೂಗಾರ

 ಕನ್ನಡ ಭಾಷೆ ಬದುಕು ಕಟ್ಟಿಕೊಡುವ ಭಾಷೆ: ತಹಸಿಲ್ದಾರ್ ಹೂಗಾರ  Kannada language is the language of life: Tehsildar Hugara

ಲೋಕದರ್ಶನ ವರದಿ 

ಕನ್ನಡ ಭಾಷೆ ಬದುಕು ಕಟ್ಟಿಕೊಡುವ ಭಾಷೆ: ತಹಸಿಲ್ದಾರ್ ಹೂಗಾರ  

ತಾಳಿಕೋಟಿ   02: ಕನ್ನಡ ಭಾಷೆ ಜೀವಂತ ಭಾಸಷೆಯಾಗಿದ್ದು ಇದಕ್ಕೆ ಎರಡು ಸಾವಿರ ಐನೂರ ವರ್ಷಗಳ ಇತಿಹಾಸವಿದೆ. ಜಗತ್ತಿನ ಪುರಾತನ 10 ಭಾಷೆಗಳಲ್ಲಿ ಕನ್ನಡ ಭಾಷೆಯೂ ಕೂಡ ಒಂದು,ಇಂಥಹ ಶ್ರೀಮಂತ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಹಶೀಲ್ದಾರ್ ಡಾ.ವಿನಯಾ ಹೂಗಾರ ಹೇಳಿದರು. ಶನಿವಾರ ಪಟ್ಟಣದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕ ಆಡಳಿತದ ವತಿಯಿಂದ ಹಮ್ಮಿಕೊಂಡ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕ ಏಕೀಕರಣಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರವಾಗಿದ್ದು ಅದು ಏಕೀಕರಣದ ಹೃದಯ ಭಾಗವಾಗಿದೆ ಎಂದು ಹೇಳಿದ ಅವರು 1956 ನವೆಂಬರ್ 1 ರಂದು ಮೈಸೂರು ರಾಜ್ಯ ಎಂದು ಘೋಷಿಸಲಾಗಿತ್ತು ಮುಂದೆ 1973 ನವಂಬರ್ 1ರಂದು ಇದನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ದೇಶದ ಪ್ರಗತಿಯಲ್ಲಿ ಕರ್ನಾಟಕ ಯಾವಾಗಲೂ ತನ್ನ ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು. ಪ್ರಾಚಾರ್ಯ ಡಾ.ಅನೀಲಕುಮಾರ ಇರಾಜ್ ವಿಶೇಷ ಉಪನ್ಯಾಸ ನೀಡಿ ಕನ್ನಡ ರಾಜ್ಯೋತ್ಸವ ಕನ್ನಡಾಂಬೆಗೆ ಗೌರವ ಸಲ್ಲಿಸುವ ಹಾಗೂ ಕನ್ನಡ ಭಾಷಾಭಿಮಾನ ಮೆರೆಯುವ ದಿನವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ನಾಡಿನ ಶ್ರೇಷ್ಠ ರಂಗ ಕಲಾವಿದ ರಾಜು ತಾಳಿಕೋಟಿ ಇವರಿಗೆ ತಾಲೂಕ ಆಡಳಿತ ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಕನ್ನಡ ನಾಡು ನುಡಿ ಭಾಷೆಗಾಗಿ ವಿಶೇಷ ಸೇವೆ ಸಲ್ಲಿಸಿದ ಮಹನೀಯರಿಗೆ, 2024- 25 ನೇ ಸಾಲಿನ ಎಸ್ ಎಸ್ ಎಲ್ ಸಿ ಕನ್ನಡ ಭಾಷಾ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕುಮಾರಿ ಅಂಜಲಿ ವಿಜಯಸಿಂಗ್ ಹಜೇರಿ ಹಾಗೂ ಸಂಘಡಿಗರು ಪ್ರದರ್ಶಿಸಿದ ಭರತನಾಟ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವೇದಿಕೆ ಕಾರ್ಯಕ್ರಮ ಮುನ್ನ ಕರ್ನಾಟಕ ಮಾತೆ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.ಈ ಸಮಯದಲ್ಲಿ ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನಬಾಷಾ ಜಮಾದಾರ, ಉಪಾಧ್ಯಕ್ಷೆ ಗೌರಮ್ಮ ಕುಂಬಾರ,ತಾಪಂ ಇಓ ಅನುಸೂಯಾ ಚಲವಾದಿ, ಕ್ಷೇತ್ರ ಸಮನ್ವಯಾಧಿಕಾರಿ ಆರಿ​‍್ಬ.ದಮ್ಮೂರಮಠ,ಕಸಾಪ ಜಿಲ್ಲಾಧ್ಯಕ್ಷ ಆರ್‌.ಎಲ್‌.ಕೊಪ್ಪದ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕ ಅಧ್ಯಕ್ಷ ಸಂಗಮೇಶ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಪಿಎಸ್‌ಐ ಜ್ಯೋತಿ ಖೋತ್,ಸಿಆರ್ಸಿ ರಾಜು ವಿಜಾಪುರ, ಕರವೇ ಜಿಲ್ಲಾ ಉಪಾಧ್ಯಕ್ಷ ಜೈಭೀಮ ಮುತ್ತಗಿ, ಪುರಸಭೆ ಸದಸ್ಯರು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ದುರೀಣರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ತಾಲೂಕ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಇದ್ದರು.