ಪ್ರೊ ಕೃಷ್ಣೇಗೌಡರ ಹಾಸ್ಯಭಾಷಣ ಮತ್ತು ಅನಂತ ದೇಶಪಾಂಡೆ ‘ಬೇಂದ್ರೆ ದರ್ಶನ’ ಕಾರ‌್ಯಕ್ರಮ
ಬೆಳಗಾವಿ 15: ಪ್ರಪಂಚದ ಅತ್ಯಂತ ಶಕ್ತಿಯುತ ಹಾಗೂ ಅದ್ಭುತ ಅರಿವಿನ ಭಾಷೆ ಎಂದರೆ ಅದು ಕನ್ನಡ. ಭಾಷೆಯನ್ನು ಬಲ್ಲೆನೆಂಬ ಹೆಚ್ಚಿನ ಜನರಲ್ಲಿ ಭಾಷೆ ಬಳಿಕೆ, ಭಾಷಾಜ್ಞಾನದ ಅರಿವು ತುಂಬ ಕಡಿಮೆ ಇದೆ. ಇವರಿಗಿಂತ ಹೆಚ್ಚು ಗ್ರಾಮೀಣದ ಪ್ರದೇಶದ ಜನರು ಪದಗಳನ್ನು ಮಾತಿನ ಮೂಲಕವೇ ಸೃಷ್ಟಿಸುತ್ತಾರೆ. ಈ ಜನರ ಭಾಷೆಗಳಲ್ಲಿ ಭಾವನೆಗಳಿರುತ್ತವೆ ಆದ್ದರಿಂದ ಇವರು ಸೃಷ್ಟಿಸುವ ಪದಗಳು ವೇಗವಾಗಿ ಬಾಯಿಂದ ಬಾಯಿಗೆ ಹರಡುತ್ತವೆ ಎಂದು ಖ್ಯಾತ ವಾಗ್ಮಿ, ನಗೆಮಾತುಗಾರ ಪ್ರೊ ಕೃಷ್ಣೇಗೌಡ ಇಂದಿಲ್ಲಿ ಹೇಳಿದರು.
ನಗರದ ತೇಜೋಮಯ ಮತ್ತು ಹಾಸ್ಯಕೂಟ ಸಂಘಟನೆಯವರು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ನಿನ್ನೆ ದಿನಾಂಕ 14 ಶನಿವಾರದಂದು ಪ್ರೊ ಕೃಷ್ಣೇಗೌಡರ ಹಾಸ್ಯಸಂಜೆ ಮತ್ತು ಅನಂತ ದೇಶಪಾಂಡೆಯವರ ಬೇಂದ್ರೆ ದರ್ಶನ ಕಾರ‌್ಯಕ್ರಮವನ್ನು ಹಮ್ಮಿಕೊಂಡಿದ್ದರು. ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಪ್ರೋ. ಕೃಷ್ಣೇಗೌಡರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಕೃಷ್ಣೇಗೌಡರು ಇಂದು ಡಾ. ರಾಜಕುಮಾರ, ಪಿಬಿ. ಶ್ರೀನಿವಾಸ, ಚಿ. ಉದಯಶಂಕರ ಇವರು ಇಲ್ಲದೇ ಇರಬಹುದು ಅವರ ಅಭಿನಯ, ಹಾಡುಗಳ ರಚನೆ ಮತ್ತು ಹಾಡುಗಾರಿಕೆ ಶಾಶ್ವತ. ಹೀಗೆ ಕಲಾವಿದನಿಗೆ ಸಾವಿರಬಹುದು ಆದರೆ ಕಲೆಗೆ ಸಾವಿಲ್ಲ ಎಂದು ಹೇಳಿದರು.
ಬದುಕಿಗಾಗಿ ಶಿಕ್ಷಣ ಪಡೆಯಬೇಕೆ ಹೊರತು ಉದ್ಯೋಗ ಅಥವಾ ಹಣಗಳಿಕೆಗಾಗಿ ಅಲ್ಲ. ಎಲ್ಲವನ್ನು ಹಣದಿಂದ ಕೊಂಡುಕೊಳ್ಳಲಾಗುವುದಿಲ್ಲ. ದೊಡ್ಡ ಬಂಗಲೆಯಲ್ಲಿರುವ ಶ್ರೀಮಂತನಿಗಿಂತ ಮನೆ ಹೊರಗೆ ಮಲಗಿರುವ ಬಿಕ್ಷುಕ ತುಂಬ ನೆಮ್ಮದಿಯಿಂದ ಇರುತ್ತಾನೆ. ಸಂತೋಷ ಸಂಭ್ರಮವನ್ನು ಕೊಂಡುಕೊಳ್ಳುವ ವಸ್ತುಗಳಲ್ಲ. ಅವುಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ತೇಜೋಮಯ ಸಂಘಟನೆಯನ್ನು ಹುಟ್ಟು ಹಾಕಿರುವ ಅರವಿಂದ ಪಾಟೀಲರು ಯಾವಾಗಲೂ ಕ್ರಿಯಾಶೀಲರು. ಅವರಿದ್ದಲ್ಲಿ ಸಾಂಸ್ಕೃತ ವಾತಾವರಣ ನಿರ್ಮಾಣವಾಗಿ ಬಿಡುತ್ತದೆ. ಸಂಘಟನೆಗಳಿರದಿದ್ದಲ್ಲಿ ಜೀವನ ನೀರಸವೆನಿಸುತ್ತಿತ್ತು. ತೇಜೋಮಯ ವೈವಿದ್ಯಮಯ ಕಾರ‌್ಯಕ್ರಮಗಳನ್ನು ನೀಡುತ್ತ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಲಿ ಎಂದು ಹೇಳಿದರು. ಅದರಂತೆ ಹತ್ತು ವರ್ಷಗಳ ಕಾಲ ನಿರಂತರವಾಗಿ ಹಾಸ್ಯಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಹಾಗೂ ತಂಡದವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ದೂರದರ್ಶನ ಕಲಾವಿದ ಧಾರವಾಡದ ಅನಂತ ದೇಶಪಾಂಡೆ ತಮ್ಮ ಅದ್ಭುತ ಅಭಿನಯದೊಂದಿಗೆ ಸಾಕ್ಷಾತ ದ.ರಾ ಬೇಂದ್ರೆಯವರೇ ಕಣ್ಣಮುಂದೆ ತಂದು ನಿಲ್ಲಿಸಿ; ಬೇಂದ್ರೆ ಜೀವನ ದರ್ಶನ ಮಾಡಿಸಿದರು. ಬೇಂದ್ರೆಯವರ ದುಃಖದ ಪ್ರಸಂಗ ನಿರೂಪಿಸುವ ಸಂದರ್ಭದಲ್ಲಿ ದೇಶಪಾಂಡೆಯವರ ಕಣ್ಣಲ್ಲಿ ನೀರು ತುಂಬಿಬಂದು ತುಂಬ ಭಾವುಕರಾದರು.
ತೇಜೋಮಯ ಸಂಘಟನೆಯ ಅಧ್ಯಕ್ಷರಾದ ಅರವಿಂದ ಪಾಟೀಲ, ನಮ್ಮ ಸಂಘಟನೆಯಿಂದ ವೈವಿದ್ಯಮಯ ಕಾರ್ಯಕ್ರಮಗಳ ಯೋಜನೆಗಳನ್ನು ಹೊಂದಿದ್ದು ಎಲ್ಲರೂ ಸಹಾಯ ಸಹಕಾರ ನೀಡುವಂತೆ ಕೇಳಿಕೊಂಡರು.
ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ತಮ್ಮ ಪ್ರಸ್ತಾವಿಕ ನುಡಿಯಲ್ಲಿ ಬೇರೆಯವರು ಹೇಳಿದ ನಗೆಹನಿಗಳನ್ನೇ ಹೇಳುವುದರಕ್ಕಿಂತ ತಮ್ಮ ಜೀವನದಲ್ಲಿ ಘಟಿಸಿರುವ ಹಾಸ್ಯ ಪ್ರಸಂಗಗಳನ್ನು ಹಂಚಿಕೊಳ್ಳಬೇಕು ಇವುಗಳಲ್ಲಿ ನೈಜತೆಯಿರುತ್ತದೆ ಇವು ಜನರನ್ನು ನಗೆಸುವುದರಲ್ಲಿ ಯಾಶಸ್ವಿಯಾಗುತ್ತವೆ ಎಂದು ಹೇಳಿದರು.
ಉಮೇಶ ಬಡಿಗೇರ ನಿರೂಪಿಸಿದರು. ತೇಜೋಮಯ ಹಾಗೂ ಹಾಸ್ಯಕೂಟ ಪದಧಿಕಾರಿಗಳಾದ ಪ್ರೊ. ಜಿ. ಕೆ. ಕುಲಕರ್ಣಿ, ಜಿ. ಎಸ್. ಸೋನಾರ, ಎಂ. ಬಿ. ಹೊಸಳ್ಳಿ, ಅರವಿಂದ ಹುನಗುಂದ, ತಾನಾಜಿ, ಚಿದಂಬರ ಮುನವಳ್ಳಿ, ವಿನೋದ ಸಪ್ಪಣ್ಣವರ, ಬಸವರಾಜ ತಳವಾರ ಅಲ್ಲದೇ ಹಿರಿಯ ಪತ್ರಕರ್ತ ಮುರುಗೇಶ ಶಿವಪೂಜಿ, ಖ್ಯಾತ ನಗೆಮಾತುಗಾರ ರವಿ ಭಜಂತ್ರಿ, ಬೆಳಗಾವಿಯ ಡಿಡಿಪಿಐ ಲೀಲಾವತಿ ಹಿರೇಮಠ, ಪ್ರೊ. ಎಂ.ಎಸ್. ಇಂಚಲ, ಡಾ. ಎಚ್. ಬಿ. ರಾಜಶೇಖರ, ಡಾ. ಅರವಿಂದ ಕುಲಕರ್ಣಿ, ಪದ್ಮಾ ಕುಲಕರ್ಣಿ, ಶೀರೀಷ ಜೋಶಿ, ಡಾ. ರಾಮಕೃಷ್ಣ ಮರಾಠಿ, ಬಿ.ಕೆ. ಕುಲಕರ್ಣಿ, ಶರಣಗೌಡ ಪಾಟೀಲ, ಶಾಂತಾ ಆಚಾರ್ಯ, ದೀಪಿಕಾ ಚಾಟೆ ಮುಂತಾದ ಗಣ್ಯರು, ಆಸಕ್ತರು ಉಪಸ್ಥಿತರಿದ್ದರು.