ಕುಸಿದು ಕೂತ ಹೆಜ್ಜೆಗೆ ಉತ್ಸಾಹ ತುಂಬುವ ಕಲ್ಲಳ್ಳಿಯ ಗಾಯಗೊಂಡ ಗಜಲ್

ಊರು ಕೇರಿಗಿಂತ ಮೊದಲು ನಮ್ಮೊಳಗೊಂದು ಕ್ರಾಂತಿಯಾಗಬೇಕು 

ಭ್ರಮೆಯ ಪಂಜರದಿಂದ ಹೊರಬಂದು ಹಾರಲು ಕಲಿಯಬೇಕು 

“ಗಜಲ್ ಹುಟ್ಟುವ ಘಳಿಗೆ ನಾನು ಮರಗಟ್ಟಿ ಹೋಗಿರುತ್ತೇನೆ. ಕೆಲವೊಮ್ಮೆ ಕಣ್ಣೀರಿನ ಕೊಳವಾಗಿ ಮತ್ತೊಮ್ಮೆ ಮೌನದ ಮಡುವಾಗಿ ಕಳೆದು ಹೋಗಿರುತ್ತೇನೆ” ಎಂದು ಬರೆಯುವ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಭಾವತೀವ್ರತೆಯಿಂದ, ಧ್ಯಾನಸ್ಥನಾಗಿ ಗಜಲ್ ಬರೆಯುತ್ತಾರೆ ಎಂಬುದಕ್ಕೆ ಈ ಮೇಲಿನ ಗಜಲ್ ಸಾಲುಗಳೇ ಸಾಕ್ಷಿ. ‘ಕಲ್ಲಳ್ಳಿ’ ಎಂಬ ಕಾವ್ಯನಾಮದಿಂದ ಗಜಲ್ ಬರೆಯುವ ನಾರಾಯಣಪ್ಪ ಮಾಲೂರು ತಾಲ್ಲೂಕಿನ ದೊಡ್ಡಕಲ್ಲಹಳ್ಳಿ ಗ್ರಾಮದವರು. ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಳೇಸಂದ್ರ ಗ್ರಾಮದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕವಿತೆ, ಗಜಲ್, ಆಧುನಿಕ ವಚನಗಳ ರಚನೆಯಲ್ಲಿ ತೊಡಗಿರುವ ಇವರು ‘ಬೆಂಗಾಡು’, ‘ಉತ್ತೀತಿಯ ಹಾಡು’, ‘ಎದೆಯೊಳಗಿನ ಇಬ್ಬನಿ’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಕಲ್ಲಳ್ಳಿ ಗಜಲ್‌’ ಇವರ ಪ್ರಥಮ ಗಜಲ್ ಸಂಕಲನ. ಇವರ ಸಾಹಿತ್ಯ ಕೃಷಿಗೆ ಗೋವಿಂದದಾಸ್ ಪ್ರಶಸ್ತಿ, ಬೆಳಕು ಸಾಹಿತ್ಯ ಪ್ರಶಸ್ತಿ, ಕುವೆಂಪು ಅನಿಕೇತನ ಪ್ರಶಸ್ತಿ, ದಸಾಪ ರಾಜ್ಯ ಘಟಕದ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ ಲಭಿಸಿವೆ. ಮೈಸೂರು, ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಜನನುಡಿ ಮಂಗಳೂರು, ಮೇ ಸಾಹಿತ್ಯ ಸಮ್ಮೇಳನ ಧಾರವಾಡ, ಕೋಲಾರದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ, ಕನಕಗಿರಿಯಲ್ಲಿ ನಡೆದ ಮೊದಲ ಗಜಲ್ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ಕಾವ್ಯಪ್ರತಿಭೆ ಮೆರೆದಿದ್ದಾರೆ. ಇವರ ರಚನೆಯ ಒಂದು ಗಜಲ್‌ನ ಓದು ಮತ್ತು ಒಳನೋಟ ನಿಮಗಾಗಿ. 

ಗಜಲ್ 

ನಿನ್ನ ಬೆನ್ನು ನೀನೇ ತಟ್ಟಿಕೊಳ್ಳಬೇಕು ಒಮ್ಮೊಮ್ಮೆ  

ನಿನ್ನ ಕಣ್ಣು ನೀನೇ ಒರೆಸಿಕೊಳ್ಳಬೇಕು ಒಮ್ಮೊಮ್ಮೆ 

ಬಹುಪಾಲು ಹೃದಯಗಳು ಸಂತೆಯಲ್ಲಿ ಬಿಕರಿಗಿರುವಾಗ 

ನಿನ್ನ ಕವಿತೆಯನ್ನು ನೀನೇ ಓದಿಕೊಳ್ಳಬೇಕು ಒಮ್ಮೊಮ್ಮೆ 

ಅವರ ಕಿವಿಗಳಲ್ಲಿ ಅಸಹನೆಯ ಬಳ್ಳಿ ಹಬ್ಬಿಕೊಂಡಿರುವಾಗ 

ನಿನ್ನ ಮಾತನು ನೀನೇ ಕೇಳಿಸಿಕೊಳ್ಳಬೇಕು ಒಮ್ಮೊಮ್ಮೆ 

ಅವರವರ ಗೊಡವೆಗಳಲ್ಲಿ ಅವರವರು ಮುಳುಗಿರುವಾಗ 

ನಿನ್ನ ಹಾಡನು ನೀನೇ ಹಾಡಿಕೊಳ್ಳಬೇಕು ಒಮ್ಮೊಮ್ಮೆ 

ಕಾಯದಿರು ಕಲ್ಲಳ್ಳಿ, ಅವರು ನಡೆಯಲು ಬಯಸದಿರುವಾಗ 

ನಿನ್ನ ದಾರಿಯನು ನೀನೇ ಕಂಡುಕೊಳ್ಳಬೇಕು ಒಮ್ಮೊಮ್ಮೆ 


                                                               - ದೊಡ್ಡಕಲ್ಲಹಳ್ಳಿ ನಾರಾಯಣಪ್ಪ 


ಇಲ್ಲಿ ಯಾರ ನೋವಿಗೂ ಯಾರ ಮನಸೂ ಕರಗುವುದಿಲ್ಲ. ಅವಸರದ ಜಗತ್ತಿನಲ್ಲಿ ನಿನ್ನ ದುಃಖಗಳನ್ನು ಕೇಳುವ ಕಿವಿಗಳೇ ಕಡಿಮೆ. ಖುಷಿಯಾದಾಗ ನೀನೇ ಹರುಷಪಟ್ಟು, ದುಃಖವಾದಾಗ ಸುಮ್ಮನೆ ಕಣ್ಣೀರು ಕೆಡವಿ ಮುನ್ನಡೆಯುವುದು ಬದುಕು ಕಲಿಸುವ ದೊಡ್ಡ ಪಾಠ. ಗೋಪಾಲಕೃಷ್ಣ ಅಡಿಗರು ತಮ್ಮ ಕವಿತೆಯಲ್ಲಿ ಹೇಳಿಲ್ಲವೇ? “ಅವರಿವರ ನಂಬುಗೆಯ ಮಳಲರಾಶಿಯ ಮೇಲೆ ಮಹಲು ನಿರ್ಮಿಸಲಿಹೆಯಾ? ನಿನಗೆ ನೀನೇ ಗೆಳೆಯಾ, ನಿನಗೆ ನೀನೇ”. ದಿನದಿನಕ್ಕೂ ಸಂಕೀರ್ಣವಾಗುತ್ತಿರುವ ಈ ಬದುಕಿನಲ್ಲಿ ಮನುಷ್ಯ ಸಂಬಂಧಗಳು, ಮಾನವೀಯ ಮೌಲ್ಯಗಳು ಬೆಲೆ ಕಳೆದುಕೊಂಡಿವೆ. ಆಧುನಿಕ ಆವಿಷ್ಕಾರದ ಯಾಂತ್ರಿಕತೆಗೆ ಅಂಟಿಕೊಂಡಿರುವ ಜೀವ, ಜೀವನಗಳು ಗಾಣದೆತ್ತಿನಂತೆ ನೀರಸವಾಗಿರುವ ಸ್ಥಿತಿ. ಒಬ್ಬರಿಗೂ ಮತ್ತೊಬ್ಬರ ಮೇಲೆ ಕಾಳಜಿ, ಅನುಕಂಪ, ಪ್ರೀತಿ ಕಾಣಿಸದೆ ಗೌಣವೆನಿಸುವ ಕ್ಷಣಗಳು ರೇಜಿಗೆ ಹುಟ್ಟಿಸುತ್ತವೆ. ಅಂತಹ ತೀರಾ ನೋವಿನ ಸಂದರ್ಭದಲ್ಲಿ ಅರಳಿದ ‘ಕಲ್ಲಳ್ಳಿ’ಯ ಈ ಗಜಲ್, ಒಂದರೆಕ್ಷಣ ಓದಿದಾಗ ಈ ಸಾಲುಗಳು ಸತ್ಯವನ್ನೇ ಸಾರುತ್ತಿವೆ, ಹೌದಲ್ಲವೇ? ಎನಿಸಿಬಿಡುತ್ತದೆ. ‘ಲೋಕದ ಡೊಂಕನು ನೀವೇಕೆ ತಿದ್ದುವಿರಿ, ನಿಮ್ಮ ತಪ್ಪುಗಳನು ತಿದ್ದಿಕೊಳ್ಳಿ ಸಾಕು’ ಎಂಬ ಜ್ಞಾನೋದಯ ಈ ಗಜಲ್ ಓದಿದಾಗ ಆಗುತ್ತದೆ. 

ನಿನ್ನ ಗೆಲುವಿಗೆ ನೀನೇ ಚಪ್ಪಾಳೆ ತಟ್ಟಿಕೊಳ್ಳಬೇಕು. ನಿನ್ನ ನೋವಿಗೆ ನೀನೇ ಸಾಂತ್ವನ ಹೇಳಿಕೊಳ್ಳಬೇಕು. ಬೇರೆಯವರ ನೆರವು ನೀರೀಕ್ಷಿಸಿದೆಯೋ ನಿರಾಸೆ ಕಟ್ಟಿಟ್ಟ ಬುತ್ತಿ. ಇದು ಎಲ್ಲರ ಅನುಭವಕ್ಕೆ ಬಂದ ಸಂಗತಿ. ಸಂಭ್ರಮಕ್ಕೆ ಸಾವಿರ ಮಿತ್ರರಿದ್ದರೂ ಆಪತ್ತಿನಲ್ಲಿ ನೀನು ಒಬ್ಬಂಟಿಯೇ. ನಿನ್ನ ಬದುಕಿನ ಶಿಲುಬೆಯನ್ನು ನೀನೇ ಹೊರಬೇಕೆ ವಿನಹ ಇನ್ನೊಬ್ಬರ ಹೆಗಲನ್ನು ಅಪೇಕ್ಷಿಸುವುದು ತರವಲ್ಲ. ಈ ಸತ್ಯವನ್ನು ಅರಿತವನು ಯಾವತ್ತೂ ಕುಸಿದು ಕೂರುವುದಿಲ್ಲ. ಇಂದು ಹೃದಯಗಳು ಕೂಡ ಬೆಲೆಯ ಹಣೆಪಟ್ಟಿಯನ್ನು ಅಂಟಿಸಿಕೊಂಡು ಮಾರಾಟಕ್ಕಿರುವಾಗ ಇನ್ಯಾರಿಗೋ ಬರೆದ ಕವಿತೆಯನ್ನು ನಿನಗೋಸ್ಕರ ನೀನೇ ಓದಿ, ಸಮಾಧಾನ ಪಟ್ಟುಕೊಳ್ಳಬೇಕು. ದುಡ್ಡಿಗೆ ಮಾರಿಕೊಂಡವರ ಮುಂದೆ ಭಾವನೆಗಳಿಗೆಲ್ಲಿದೆ ಬೆಲೆ? ನಿನ್ನ ಮಾತಿಗೆ ಅವರಲ್ಲಿ ಅಸಹನೆ, ಚಡಪಡಿಕೆ ಹುಟ್ಟಿಕೊಂಡಿರುವಾಗ ಅದನ್ನು ದಾಟಿಸುವುದಾದರೂ ಹೇಗೆ? ಸುಮ್ಮನೆ ನಿನ್ನ ಸಲುವಾಗಿ ನೀನು ಹಾಡಿಕೋ. ಯಾರು ಕಿವಿ ಮುಚ್ಚಿದರೂ ಚಿಂತೆ ಬೇಡ. ಅವರವರ ತಾಪತ್ರಯಗಳೇ ಅವರಿಗೆ ಹೊರಲಾರದಷ್ಟು ಭಾರವಾಗಿರುವಾಗ ನಿನ್ನ ನೋವಿನ ಹಾಡಿಗೆ ಅವರಲ್ಲಿ ಜಾಗವಿಲ್ಲ. ಅವರು ನಡಿಗೆ ನಿಲ್ಲಿಸಿ ಮೋಜು ನೋಡುವಾಗ, ನಿನ್ನ ಕಾಲುದಾರಿಯನ್ನು ನೀನೇ ಹುಡುಕಿಕೋ. ಅವರು ನಡೆಯುವುದನ್ನು ನೋಡುತ್ತಾ ಕೂರಬೇಡ. ನಾರಾಯಣಪ್ಪ ಅವರು ತುಂಬ ಗಾಢವಾಗಿ ಅನುಭವಿಸಿ ಗಜಲ್‌ನ ಎಲ್ಲ ಸಾಲುಗಳನ್ನು ಬರೆದ ಕಾರಣಕ್ಕೆ ಓದುಗರನ್ನು ಕಾಡುತ್ತಾ, ಸೆಳೆಯುತ್ತಾ ಹೋಗುತ್ತದೆ. 

ಕಲ್ಲಳ್ಳಿಯ ಗಾಯಗೊಂಡ ಗಜಲ್ ಇದು ಎಂದರೆ ತಪ್ಪಾಗಲಾರದು. ನೊಂದ ಎದೆಗೆ ಕಿರುಬೆರಳಿನ ಸಾಂತ್ವನ, ಕುಸಿದು ಕೂತ ಹೆಜ್ಜೆಗೆ ಉತ್ಸಾಹ ತುಂಬುವ ಚೇತನ, ಬಾಳಿನ ದಾರಿಗೆ ಭರವಸೆ ತುಂಬುವ ಕಿರಣವಾಗಿ ಕಾಡುವ ಈ ಗಜಲ್ ವಾಸ್ತವವನ್ನು ತೆರೆದಿಡುತ್ತದೆ. ಕವಿಗೆ ನಮನಗಳು.   

- * * * -