ಕರವೇ ಪ್ರತಿಭಟನೆ: ನೀರು ಬಿಡುಗಡೆ ವಿರೋಧಿಸಿ ಉರುಳು ಸೇವೆ

ಕರವೇ ಪ್ರತಿಭಟನೆ: ನೀರು ಬಿಡುಗಡೆ ವಿರೋಧಿಸಿ ಉರುಳು ಸೇವೆ KaRaVe Protest: 'Urulu Seve' to Oppose Water Release

ಲೋಕದರ್ಶನ ವರದಿ 

ಬೆಳಗಾವಿ 01: ನಮ್ಮ ಕರ್ನಾಟಕದ ಕಾವೇರಿ, ಮಹದಾಯಿ ಹಾಗೂ ಕೃಷ್ಣಾ ನದಿಗಳ ನೀರನ್ನು ನೆರೆಯ ರಾಜ್ಯಗಳಿಗೆ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಉರುಳು ಸೇವೆಯೊಂದಿಗೆ ಶನಿವಾರ ಪ್ರತಿಭಟನೆ ನಡೆಸಿದರು. 

ಶನಿವಾರ ನಗರ ಚನ್ನಮ್ಮ ವೃತ್ತದಲ್ಲಿ ಸೇರಿದ ಕರವೇ ಕಾರ‌್ಯಕರ್ತರು ರಾಜ್ಯದ ನೀರನ್ನು ಯಾವುದೇ ಕಾರಣಕ್ಕೂ ಹೊರ ರಾಜ್ಯಗಳಿಗೆ ಬಿಡಬಾರದು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ಕೊಡಗಳು ಮತ್ತು ಚೆಂಬುಗಳನ್ನು ಪ್ರದರ್ಶಿಸಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಂತೆ ಒತ್ತಾಯಿಸಿದರು.  

ಈ ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ಮುಖಂಡ ವಾಜೀದ್ ಹಿರೇಕೋಡಿ, ಕಾವೇರಿ, ಮಹದಾಯಿ ಮತ್ತು ಕೃಷ್ಣಾ ನದಿಗಳ ನೀರು ಕರ್ನಾಟಕದ ಹಕ್ಕು ಎಂದು ಹೇಳಿದರು. ನೀರು ಬಿಡುಗಡೆ ಮುಂದುವರಿದರೆ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಕರ್ನಾಟಕದ ನೀರಿನ ಹಕ್ಕನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.  

ಇದೇ ವೇಳೆ ಮಾತನಾಡಿದ ಮತ್ತೊಬ್ಬ ಮುಖಂಡ ಮಹಾಂತೇಶ ರಣಗಟ್ಟಿಮಠ, ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದರು. ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಆಗಸ್ಟ್‌ 13ರಂದು ‘ಕರ್ನಾಟಕ ಬಂದ್‌’ಗೆ ಕರೆ ನೀಡಿದ್ದು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬೆಂಬಲ ನೀಡುವಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ಹಾಗೂ ಕನ್ನಡಪರ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.