ಪ್ರಧಾನಿ ಭೇಟಿಯಾದ ಕೇಜ್ರಿವಾಲ್; ದೆಹಲಿ ಹಿಂಸಾಚಾರ, ಕೊರೋನಾ ವೈರಸ್ ಬಗ್ಗೆ ಚರ್ಚೆ

ನವದೆಹಲಿ, ಮಾರ್ಚ್ 3, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ 47 ಮಂದಿ ಸಾವನ್ನಪ್ಪಿದ ಇತ್ತೀಚಿನ ಹಿಂಸಾಚಾರದ ಬಳಿಕ ರಾಷ್ಟ್ರ ರಾಜಧಾನಿಯ ಪರಿಸ್ಥಿತಿ ಕುರಿತು ಚರ್ಚಿಸಿದರು. ಅದೇ ರೀತಿ ಮಾರಣಾಂತಿಕ ಕೊರೋನಾವೈರಸ್ ಸೋಂಕು ಹರಡದಂತೆ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.ಸಂಸತ್ತಿನ ಆವರಣದಲ್ಲಿ ನಡೆದ ಸಭೆಯ ನಂತರ, ಕೇಜ್ರಿವಾಲ್ ಚರ್ಚೆ "ಫಲಪ್ರದ"ವಾಗಿತ್ತು ಎಂದು ತಿಳಿಸಿದರು. ಹಿಂಸಾಚಾರದ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತಂದು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಪ್ರಧಾನಮಂತ್ರಿಯನ್ನು ಕೋರಿರುವುದಾಗಿ ತಿಳಿಸಿದರು.ಭಾನುವಾರ ಹರಡಿದ್ದ ವದಂತಿಗಳನ್ನು ಉಲ್ಲೇಖಿಸಿದ ಅವರು, ಪರಿಸ್ಥಿತಿಯನ್ನು ಚಾತುರ್ಯದಿಂದ ನಿಭಾಯಿಸುವಲ್ಲಿ ದೆಹಲಿ ಪೊಲೀಸರ ಕ್ರಮವನ್ನು ಶ್ಲಾಘಿಸಿದರು.ಇಲ್ಲಿಯವರೆಗೆ ಅನೇಕ ಶಂಕಿತ ಪ್ರಕರಣಗಳು ವರದಿಯಾಗಿರುವುದರಿಂದ ಮಾರಣಾಂತಿಕ ಕೊರೋನವೈರಸ್ ಹರಡುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಜ್ರಿವಾಲ್ ಇದೇ ವೇಳೆ ಮನವಿ ಮಾಡಿದರು.