ಕಂಡಕಂಡವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಕೆ.ಸಿ.ವೇಣುಗೋಪಾಲ್

 ಬೆಂಗಳೂರು, ಅ15:            ಕಾಂಗ್ರೆಸ್  ಬಿಜೆಪಿಯವರಂತೆ ಕಂಡಕಂಡವರನ್ನೆಲ್ಲ ಪಕ್ಷಕ್ಕೆ ಸೇರ್ಪಡೆಗೊಳಿಸುವುದಿಲ್ಲ. ಅಭ್ಯರ್ಥಿಗಳ ಅರ್ಹತೆ ಆಧಾರದ ಮೇಲೆ ಸೇರಿಸಿಕೊಳ್ಳಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು 15 ಕ್ಷೇತ್ರಗಳಿಗೆ ಉಪಚುನಾವಣೆ ಸಂಬಂಧ ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ ಸಂಬಂಧ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಚುನಾವಣಾ ವೀಕ್ಷಕರ ಸಭೆ ನಡೆಯುತ್ತಿದೆ. ಸಭೆಗೂ ಮುನ್ನ ಸುದ್ದಿಗಾರರಿಗೆ ಬಿಜೆಪಿಯ ಪರಾಜಿತ ಅಭ್ಯರ್ಥಿಗಳು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ಪಕ್ಷ ಸೇರ್ಪಡೆ ಬಗ್ಗೆ ಮೊದಲು ಚರ್ಚಿಸಿ ಸಾಧಕ ಬಾಧಕಗಳ ಬಗ್ಗೆ ಚಿಂತನೆ ನಡೆಸಿ ಆನಂತರ ಕ್ರಮಕೈಗೊಳ್ಳಲಾಗುವುದು. ಉಪಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದರು. ಆದಾಯ ತೆರಿಗೆ ದಾಳಿ ವಿಚಾರವಾಗಿ ಕಿಡಿಕಾರಿದ ಅವರು, ರಾಜಕೀಯ ಪ್ರೇರಿತವಾಗಿ ದಾಳಿ ನಡೆಯುತ್ತಿದೆ. ದಾಳಿಯ ಹಿಂದೆ ರಾಜಕೀಯ ಕಾರ್ಯಸೂಚಿ ಕೆಲಸಮಾಡುತ್ತಿದೆ. ಐಟಿ,ಇಡಿ, ಸಿಬಿಐ ಇಲಾಖೆಗಳು ಏಕಪಕ್ಷೀಯವಾಗಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂಸ್ಥೆಗಳು ಕೇಂದ್ರದ ಕೈಗೊಂಬೆಗಳಾಗಿವೆ ಎಂದು ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆ ಬಂದಾಗಲೇ ಈ ದಾಳಿಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ಆಯುಧಗಳಂತೆ ಬಳಸಿಕೊಳ್ಳುತ್ತಿದೆ. ಚುನಾವಣಾ ಸಂದರ್ಭದಲ್ಲಿ ಇಂತಹ ನಾಟಕ ಸಾಮಾನ್ಯ. ಕಾಂಗ್ರೆಸ್ಸಿಗರು ಕಾನೂನಿಗೆ ಬದ್ಧರಾಗಿದ್ದಾರೆ. ಐಟಿ ದಾಳಿ ಕಾಂಗ್ರೆಸ್ ನಾಯಕರ ಮೇಲಷ್ಟೇ ಏಕೆ ನಡೆಯುತ್ತಿವೆ ? ಬಿಜೆಪಿಯ ನಾಯಕರ ಮೇಲೂ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದ್ದೇ ಬಿಜೆಪಿಯ ಕುದುರೆ ವ್ಯಾಪಾರದಿಂದ. ಸಾಕಷ್ಟು ಕಪ್ಪು ಹಣ ವರ್ಗಾವಣೆ ಆಗಿದೆ. ಅದರ ಬಗ್ಗೆ ತನಿಖೆ ಏಕಿಲ್ಲ ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರತಿಪಕ್ಷಗಳ ವಿರುದ್ಧ ಆಯುಧಗಳಂತೆ ಬಳಕೆ ಮಾಡಿಕೊಳ್ಳುತ್ತಿದೆ. ಈ ಆಟ ಹೆಚ್ಚು ದಿನ ನಡೆಯುವುದಿಲ್ಲ. ಚುನಾವಣಾ ಆಯೋಗವನ್ನೂ ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಉಪ ಚುನಾವಣೆ ಎದುರಾಗಿದ್ದರೂ ನೀತಿ ಸಂಹಿತೆ ಎಂಬುದು ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ. ಬಿಜೆಪಿ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಿರ್ಣಯ ತೆಗೆದುಕೊಳ್ಳುತ್ತಿದೆ. ಚುನಾವಣಾ ಆಯೋಗ ಯಾವುದರ ಬಗ್ಗೆಯೂ ಧ್ವನಿ ಎತ್ತುತ್ತಿಲ್ಲ ಎಂದು ವೇಣುಗೋಪಾಲ್ ಕಿಡಿಕಾರಿದರು. ದೇಶದಲ್ಲಿ ಆರ್ಥಿಕ ಕ್ಷೇತ್ರ ಕುಸಿದು ಹೋಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿಯೇ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಪಿ ವಿ ನರಸಿಂಹರಾವ್ ಮಾದರಿಯ ಆರ್ಥಿಕ ಯೋಜನೆ ಜಾರಿ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದರು.