ಕಲಬುರಗಿ: 1ರಿಂದ 10ನೇ ತರಗತಿ ನಡೆಸದಂತೆ ಡಿಡಿಪಿಐ ಸೂಚನೆ

ಕಲಬುರಗಿ, ಮಾ.13, ಕೊರೊನಾ ಸೋಂಕಿಗೆ ಕಲಬುರಗಿ ವೃದ್ಧ ಬಲಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ನಡೆಸದಂತೆ ಡಿಡಿಪಿಐ ಎಸ್ ಬಿ ಬಾಡಂಗಡಿ ಶಿಕ್ಷಕರಿಗೆ ಸೂಚಿಸಿದ್ದಾರೆ. ಪರೀಕ್ಷೆಗಳಿದ್ದರೇ, ಬೇಗ ಮುಗಿಸಿ ಮನೆಗೆ ಕಳುಹಿಸಬೇಕು. ಅಲ್ಲದೇ, 10ನೇ ತರಗತಿಯ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕಿಲ್ಲ. ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದ್ದಾರೆ.ಈಗಾಗಲೇ ಮಾಲ್, ಚಿತ್ರಮಂದಿರ ತೆರೆಯದಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.ಅಲ್ಲದೇ, ಜನರು ಗುಂಪು ಗುಂಪಾಗಿ ಸೇರದಂತೆಯೂ ನಿಗಾವಹಿಸಲಾಗಿದೆ ಎಂದರು.ಉಮ್ರಾ ತೀರ್ಥ ಯಾತ್ರೆ ಮುಗಿಸಿಕೊಂಡು ಫೆ. 29 ರಂದು 76 ವರ್ಷದ  ಮಹ್ಮದ್ ಹುಸೇನ್ ಸಿದ್ಧಿಕಿ ಎಂಬ ವೃದ್ಧ ಸೌದಿ ಅರೇಬಿಯಾದಿಂದ ಕಲಬುರಗಿಗೆ  ಬಂದಿದ್ದರು. ನಂತರ, ಮಾರ್ಚ್ 5 ರಂದು ಅವರಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರಿಗೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ವೃದ್ಧನಗಂಟಲು ದ್ರವ  ಸಂಗ್ರಹಿಸಿ, ವೈದ್ಯರು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್ ಗೆ ಕಳುಹಿಸಿದ್ದರು.ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಕುಟುಂಬ ಸದಸ್ಯರು ವೃದ್ಧನನ್ನು  ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಇನ್ನು ವೈದ್ಯಕೀಯ ವರದಿ ಬರುವ ಮುನ್ನವೇ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.ವೃದ್ಧ ಕೊರೊನಾ ವೈರಸ್ ಗೆ ಬಲಿಯಾಗಿರುವುದು  ವೈದ್ಯಕೀಯ ಪರೀಕ್ಷೆಯಲ್ಲಿ ಗುರುವಾರ ರಾತ್ರಿ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.