ವಿದ್ಯಾರ್ಥಿಗಳೊಂದಿಗೆ ಜಸ್ಟಿಸ್ ಶಿವರಾಜ ವಿ. ಪಾಟೀಲ ಸಂವಾದ‘ಸಂವಿಧಾನ ನಮ್ಮ ಜೀವನ ವಿಧಾನ’
ಕಲಬುರಗಿ 18 : ಬಸವಣ್ಣನ ವಚನಗಳು ಮತ್ತು ಡಾ. ಅಂಬೇಡ್ಕರ್‌ರ ವಿಚಾರಧಾರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳೆಲ್ಲವೂ ಸಕಲರಿಗೆ ಲೇಸು ಬಯಸುವವು. ಸಂವಿಧಾನ ನಮ್ಮ ಜೀವನದ ವಿಧಾನ ಆಗಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ ನುಡಿದರು.ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಮಂಗಳವಾರ ಬೆಳಿಗ್ಗೆ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಮ್ಮೆಯಿಂದ ಭಾರತೀಯನಾಗಬೇಕು. ಅಭಿಮಾನದಿಂದ ಕನ್ನಡಿಗನಾಗಬೇಕು. ಮತ್ತು ಗೌರವದಿಂದ ವಿಶ್ವಮಾನವ ಆಗಬೇಕು ಎಂದು ಹೇಳಿದರು.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡುವ ಅವಕಾಶ ಲಭಿಸಿಲ್ಲವಾದರೂ, ಅದನ್ನು ಉಳಿಸಿಕೊಳ್ಳುವ ಮತ್ತು ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಸದೃಢ, ಸಮೃದ್ಧ ಭಾರತ ಕಟ್ಟುವ ಅವಕಾಶ ಯುವ ಜನರಿಗೆ ಇದೆ ಎಂದ ಅವರು, ಕಾಸ್ಟ್, ಕ್ರೈಮ್ ಮತ್ತು ಕರ್ಶನ್ ಈ ದೇಶದ ಕ್ಯಾನ್ಸರ್ ಇದ್ದಂತೆ. ಅದನ್ನು ಹೋಗಲಾಡಿಸಲು ಯುವಜನರು ಆತ್ಮವಿಶ್ವಾಸದಿಂದ ಮುಂದೆ ಬರಬೇಕು. ಮತ್ತು ಇನ್ನೊಬ್ಬರಿಂದ ಆರಂಭವಾಗಲಿ ಎಂಬ ಮನೋಭಾವನೆ ಹೋಗಿ, ನನ್ನಿಂದಲೇ ಶುರುವಾಗಲೆಂಬ ಆಶಯ ಮೂಡಬೇಕು ಎಂದು ಅವರು ಹೇಳಿದರು.
ಸಾಧನೆಗೆ ಪರ್ಯಾಯ ಮಾರ್ಗವಿಲ್ಲ. ವಾಟ್ ನೆಕ್ಸ-್ಟ, ವಾಟ್ ಮೋರ್ ಮತ್ತು ವಾಟ್ ಎಲ್ಸ್.. ಇವುಗಳನ್ನು ಅವಲೋಕಿಸಿಕೊಂಡರೆ, ಸಾಧನಾ ಪಥ ನಿಮ್ಮದಾಗುತ್ತದೆ. ಕಲಿಯುವುದನ್ನು ಯಾವತ್ತಿಗೂ ನಿಲ್ಲಿಸಬೇಡಿ. ಯಾಕೆಂದರೆ, ಕಲಿಸುವುದನ್ನು ಪ್ರಕೃತಿ ನಿಲ್ಲಿಸುವುದಿಲ್ಲ ಎಂದು ನುಡಿದ ಅವರು, ದೇಶದ ಜನಸಂಖ್ಯೆ ದೊಡ್ಡದಿದೆ. ಒಂದು ಹುದ್ದೆಗೆ ಸಾವಿರಾರು ಅರ್ಜಿ ಇರುತ್ತವೆ. ಯಾವುದೇ ಹುದ್ದೆ ಸಿಕ್ಕರೂ ಸಂತೋಷಪಡಬೇಕು. ಆದರೆ ಶಿಕ್ಷಕ ಹುದ್ದೆ ದೊರೆತರೆ ಬಹಳ ಸಂತಸಪಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರು ಮಾತನಾಡಿ, ಅತ್ಯಂತ ಕುಗ್ರಾಮಗಳೆನಿಸಿರುವ ಎರಡು ಹಳ್ಳಿಗಳಿಂದ ರಾಷ್ಟ್ರದ ಉನ್ನತ ಸ್ಥಾನಕ್ಕೇರಿದ ಇಬ್ಬರು ಮಹನೀಯರು ಕಲ್ಯಾಣ ಕರ್ನಾಟಕದವರು ಎಂಬ ಹೆಮ್ಮೆ ನಮಗಿದೆ. ಒಬ್ಬರು ಜಸ್ಟಿಸ್ ಶಿವರಾಜ ವಿ. ಪಾಟೀಲರು ಮತ್ತು ಇನ್ನೊಬ್ಬರು ಮಲ್ಲಿಕಾರ್ಜುನ ಖರ್ಗೆಯವರು ಎಂದು ಅಭಿಮಾನದಿಂದ ನುಡಿದರು.
ಕಲಾನಿಕಾಯ ಡೀನ್ ಪ್ರೊ.ಅಬ್ದುಲ್ ರಬ್ ಉಸ್ತಾದ್ ಮತ್ತು ಇಂಗ್ಲೀಷ ಅಧ್ಯಯನ ವಿಭಾಗದ ಡೀನ್ ಪ್ರೊ.ರಮೇಶ ರಾಠೋಡ ವೇದಿಕೆಯಲ್ಲಿದ್ದರು.
ನಂತರ ವಿದ್ಯಾರ್ಥಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತ, ತಮ್ಮ ವೃತ್ತಿ ಜೀವನದ ಹಲವು ಘಟನೆಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ ಸಂಗಮ್ ನಿರೂಪಿಸಿದರೆ, ಸಹಾಯಕ ಪ್ರಾಧ್ಯಾಪಕ ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಬೆಂಗಳೂರಿನ ಸ್ವ್ಯಾನ್ ಕೃಷ್ಣಮೂರ್ತಿ, ನಿವೃತ್ತ ನ್ಯಾಯಾಧೀಶ ಎಸ್.ಎಂ. ರೆಡ್ಡಿ, ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಚೆನ್ನಾರೆಡ್ಡಿ ಪಾಟೀಲ, ಪ್ರಭುಗೌಡ, ಸಂದರ್ಶಕ ಪ್ರಾಧ್ಯಾಪಕರಾದ ಡಾ. ಶ್ರೀಶೈಲ ನಾಗರಾಳ, ಡಾ. ಸೂರ್ಯಕಾಂತ ಸುಜ್ಯಾತ್, ಡಾ. ಹನುಮಂತ ಮೇಲಕೇರಿ, ಡಾ. ಸಂತೋಷಕುಮಾರ ಕಂಬಾರ, ಡಾ. ಪೀರ್ಪ ಸಜ್ಜನ್, ಡಾ. ಶಿವಶರಣಪ್ಪ ಕೋಡ್ಲಿ, ಡಾ. ಸುನೀಲ ಜಾಬಾದಿ ಇನ್ನಿತರರಿದ್ದರು.
ಬಾಕ್ಸ‘ಕಲಂ 371 ಕ್ಕಾಗಿ ರಾತ್ರಿ ಖರ್ಗೆ ಮನೆಗೆ ಬಂದ್ರು’
ಹೈದ್ರಾಬಾದ್ ಕರ್ನಾಟಕಕ್ಕೆ 371 ಜೆ ಕಲಂ ಅನುಷ್ಠಾನಕ್ಕಾಗಿ ಒಂದು ರಾತ್ರಿ 11 ಗಂಟೆ ಸುಮಾರಿಗೆ ಆಗ ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮನೆಗೆ ಬಂದರು. ಒಂದು ತಾಸು ಕುಳಿತು, 371 ನೇ ಕಲಂ ಸಂಬಂಧಿಸಿದಂತೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ, ಡ್ರಾಫ್ಟ್ ಮಾಡಿಕೊಡುವಂತೆ ಕೋರಿದರು. ಅದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದರೂ ಗೆಲ್ಲಬೇಕು ಎಂದು ಮನವಿ ಮಾಡಿದರು. ಅದರಂತೆ ಮಾಡಿಕೊಟ್ಟು, ನಂತರ ಕೇಂದ್ರದಲ್ಲಿ ಸರ್ವಾನುಮತದಿಂದ ಅಂಗೀಕಾರ ಆಗುವಂತೆ ನೇತೃತ್ವ ವಹಿಸಿದ್ದರು ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ ನೆನಪಿಸಿಕೊಂಡರು. 371 ನೇ ಕಲಂ ತಿದ್ದುಪಡಿಗಾಗಿ ವೈಜನಾಥ ಪಾಟೀಲ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಹೋರಾಟಗಾರರಿಗೆ ವಿಶೇಷ ಧನ್ಯವಾದ ಸಲ್ಲಬೇಕು ಎಂದರು.-
ಕೋಟ್:
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 37 ಸಾವಿರ ಹುದ್ದೆಗಳು ಖಾಲಿಯಿವೆ. ಅವುಗಳನ್ನು ಭರ್ತಿ ಮಾಡುವ ಕೆಲಸವಾಗಬೇಕಿದೆ. ವೇಗವಾಗಿ ಮತ್ತು ಬದ್ಧತೆಯಿಂದ, ಕಳಕಳಿಯಿಂದ ಹುದ್ದೆಗಳನ್ನು ತುಂಬುವ ಕಾರ್ಯ ಆಗಬೇಕು. ಉದ್ಯೋಗದಿಂದ ಭವಿಷ್ಯ ಬದಲಾಗುತ್ತದೆ. ಮುಂದಿನ ಪೀಳಿಗೆಗೆ ಅನುಕೂಲ ಆಗುತ್ತದೆ.ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ
ಬಾಕ್ಸ್‌ಕಲ್ಯಾಣ ಕರ್ನಾಟಕ ‘ಲೇಖಕರ ಗ್ಯಾಲರಿ’ಗೆ ಮೆಚ್ಚುಗೆ
ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರೂಪುಗೊಂಡಿರುವ ‘ಕಲ್ಯಾಣ ಕರ್ನಾಟಕ ಭಾಗದ ಲೇಖಕರ ಭಾವಚಿತ್ರ ಮತ್ತು ಪುಸ್ತಕಗಳನ್ನೊಳಗೊಂಡ ಗ್ಯಾಲರಿಯನ್ನು ಕಂಡು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲರು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಸೇರಿದಂತೆ ಬೇರೆ ಬೇರೆ ವಿವಿಗಳಲ್ಲಿ ಗ್ರಂಥಾಲಯವಿರುತ್ತದೆ. ಆದರೆ ಆ ನೆಲದ ಲೇಖಕರ ಭಾವಚಿತ್ರ ಒಳಗೊಂಡ ಲೈಬ್ರರಿ ನಮ್ಮ ಗುಲ್ಬರ್ಗ ವಿವಿಯಲ್ಲಿದೆ ಎಂದು ಹೇಳುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.
ಬಾಕ್ಸ್‌ಜಸ್ಟಿಸ್ ಶಿವರಾಜ ವಿ. ಪಾಟೀಲರ ‘ನುಡಿಮುತ್ತು’
ಪರಿವರ್ತನೆಗೆ ಬಳಸುವ ಆಯುಧವೇ ಶಿಕ್ಷಣ.
ಬಡತನ ಮತ್ತು ಅನಕ್ಷರತೆ ಯಾವತ್ತೂ ಬರಬಾರದು. ಅದನ್ನು ಮೀರುವಂಥ ಬದುಕು ಆಗಬೇಕು.
ಒಳ್ಳೆಯದು ಮಾಡುವವರನ್ನು ಗೌರವಿಸಿರಿ, ನನ್ನದು ‘ಒಳ್ಳೆಯ ಪಕ್ಷ’ ಎನಿಸಬೇಕು.
ಹಿಂದುಳಿದವರೆಂಬ ಕೀಳರಿಮೆ ಬೇಡ, ಆತ್ಮವಿಶ್ವಾಸವಿರಲಿ.. ಮೇಲೇರುವೆ.
ಮಾತಿನಿಂದಲ್ಲ. ಕೃತಿಯಿಂದ ಆಗಬೇಕು. ನಿತ್ಯವೂ ‘ನಡೆ’ ಆಗಬೇಕು. ಬರೀ ‘ನುಡಿ’ ಆಡಬಾರದು.