ಧಾರವಾಡ 19: ಹವಾಮಾನದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳಿಂದ ಬೆಳೆಗಳ ಹಾನಿಯ ವೆಚ್ಚ ಭರಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ಕಳೆದ ಕೆಲವು ವರ್ಷಗಳಿಂದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಿದ್ದು, ಮುಂಗಾರು ಬೆಳೆಯಾದ ಹಸಿಮೆನಸಿನಕಾಯಿಗೆ ರೈತರು ವಿಮೆ ತುಂಬಲು ಜೂನ 30 ಕೊನೆಯ ದಿನವಾಗಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆ ಉಪನಿದೇರ್ಶಕ ಡಾ. ರಾಮಚಂದ್ರ.ಕೆ.ಮಡಿವಾಳ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ತಮ್ಮ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ, ಮಾತನಾಡಿದರು.
ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯು ಮುಖ್ಯವಾಗಿ ಧಾರವಾಡ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ಹಸಿ ಮೆಣಸಿನಕಾಯಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಮಾವು ಬೆಳೆಗೆ ಅನ್ವಯಿಸುತ್ತದೆ.
ಮಳೆ, ವಾತಾವಣದ ಉಷ್ಣತೆ, ಗಾಳಿಯ ವೇಗ, ವಾತಾವರಣದ ಆರ್ದತೆ ಹಾಗೂ ಇತರೆ ಹವಾಮಾನದ ವೈಪರಿತ್ಯದಿಂದಾಗುವ ಬೆಳೆಗಳ ಹಾನಿಯನ್ನು ಭರಿಸಲು ಈ ಯೋಜನೆಯನ್ನು ರಾಜ್ಯ ಸರಕಾರದಿಂದ ಅನುಷ್ಠಾನಗೊಳ್ಳಿಸಲಾಗಿದೆ ಎಂದು ಅವರು ಹೇಳಿದರು.
ಹಸಿ ಮೆಣಸಿನಕಾಯಿ ಬೆಳೆಯನ್ನು ಧಾರವಾಡ ತಾಲೂಕಿನ ಅಮ್ಮಿನಭಾವಿ, ಧಾರವಾಡ ಮತ್ತು ಗರಗ ಹೊಬಳಿ, ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೋಬಳಿ ಮತ್ತು ಕಲಘಟಗಿ ತಾಲೂಕಿನ ದುಮ್ಮವಾಡ ಹೋಬಳಿಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಐದು ಹೋಬಳಿ ಸೇರಿ ಸುಮಾರು ನಾಲ್ಕು ನೂರರಿಂದ ಐದು ನೂರು ಹೆಕ್ಟೆರ್ ಪ್ರದೇಶದಲ್ಲಿ ಪ್ರತಿ ವರ್ಷ ಹಸಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಈ ವರ್ಷ ಶೇ.37ರಷ್ಟು ಮಳೆ ಕೊರತೆ ಆಗಿರುವದರಿಂದ ಇಲ್ಲಿವರೆಗೆ ಸುಮಾರು 250 ರಿಂದ 300 ಹೆಕ್ಟೆರ್ ಪ್ರದೇಶದಲ್ಲಿ ಮಾತ್ರ ಮೆಣಸಿನ ಸಸಿ ಬಿತ್ತನೆಯಾಗಿದೆ ಎಂದು ಉಪ ನಿರ್ಧೆಶಕ ಡಾ. ರಾಮಚಂದ್ರ ತಿಳಿಸಿದರು.
ಹಸಿ ಮೇಣಸಿಕಾಯಿಗೆ ಪ್ರತಿ ಹೆಕ್ಟೆರಗೆ ರೈತ 3550 ರೂ.ಗಳನ್ನು ತಮ್ಮ ಪಾಲಿನ ಕಂತು ಆಗಿ ಬ್ಯಾಂಕಗಳಲ್ಲಿ ತುಂಬಬೇಕು. ಯೋಜನೆಯ ಮಾನದಂಡಗಳಂತೆ ಬೆಳೆ ನಷ್ಟ ಸಂಭವಿಸಿದರೆ ಪ್ರತಿ ಹೆಕ್ಟೆರ ಭೂಮಿಗೆ ಸುಮಾರು 71,000ರೂ. ಪರಿಹಾರ ರೈತರಿಗೆ ಬರುತ್ತದೆ.
ಈಗಾಗಲೇ 2016-17ರಲ್ಲಿ 992 ರೈತರು ಮತ್ತು 2017-18ರಲ್ಲಿ 1050 ರೈತರು ಈ ವಿಮೆಗೆ ನೋಂದಣಿ ಮಾಡಿಸಿಕೊಂಡು ಪರಿಹಾರ ಪಡೆದಿದ್ದಾರೆ. 2018-19 ನೇ ಸಾಲಿಗೆ 1604 ಜನ ರೈತರು ವಿಮಾ ಕಂತು ತುಂಬಿದ್ದು, ರೈತರಿಗೆ ವಿಮೆ ಹಣ ಅವರ ಬ್ಯಾಂಕ್ ಖಾತೆಗೆ ಜಮೆಯಾಗುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಕುರಿತು ಪ್ರತಿ ಗ್ರಾಮ ಪಂಚಾಯತಿಗಳಿಗೆ ಕರಪತ್ರ ಕಳುಹಿಸಲಾಗಿದೆ. ಗ್ರಾಮ ಮಟ್ಟದಲ್ಲಿ ತೋಟಗಾರಿಕಾ ಸಂಘದ ಪ್ರತಿನಿಧಿಗಳ ಮೂಲಕ, ಅಧಿಕಾರಿಗಳ ಮೂಲಕ ವಿಮಾ ಯೋಜನೆ ಕುರಿತು ಮಾಹಿತಿ ನೀಡಲು ಕ್ರಮಕೈಗೊಳ್ಳಲಾಗಿದೆ.
ಆಸಕ್ತ ರೈತರು ಬರುವ ಜೂನ 30 ರೊಳಗೆ ಜಿಲ್ಲೆಯ ಯಾವುದೇ ಬ್ಯಾಂಕ್ ಅಥವಾ ಸಹಕಾರಿ ಸಂಘದಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ನೋಂದಣಿ ಮಾಡಿಸಬಹುದು. ಆ ಮೂಲಕ ರೈತರು ಇದರ ಸದುಪಯೋಗ ಪಡೆಯಬೇಕು.
ಅಲ್ಲದೆ ತೋಟಗಾರಿಕೆ ಇಲಾಖೆಯಿಂದ ನೈಸರ್ಗಿಕವಾಗಿ ಆಹಾರ ಉತ್ಪನ್ನಗಳ ಒನಗಿಸುವ ಘಟಕ, ನೈಸರ್ಗಿಕವಾಗಿ ಹಣ್ಣು ಮಾಗಿಸುವ ಘಟಕ ಸ್ಥಾಪಿಸಲು ಸಹಾಯದನ ನೀಡಲಾಗುತ್ತಿದ್ದು, ಆಸಕ್ತ ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಡಾ.ರಾಮಚಂದ್ರ ಮಡಿವಾಳ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಧಾರವಾಡ ತಾಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕ ಅಜಿತಕುಮಾರ, ರಾಷ್ಟ್ರೀಯ ತೋಟಗಾರಿಕಾ ಮೀಷನದ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶ್ರೀದೇವಿ.ಎ.ಎಸ್., ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರವೀಣ ಕಾಮಾಟಿ ಉಪಸ್ಥಿತರಿದ್ದರು.