ಬೆಂಗಳೂರು, ಜ 10 : ನಗರದ ಜಿಕೆವಿಕೆಯ ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಜ. 11ರಿಂದ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ನ್ಯಾಯಾಂಗ ಅಧಿಕಾರಿಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ ಉದ್ಘಾಟಿಸಲಿದ್ದಾರೆ.
ರೀ-ಇಂಜಿನಿಯರಿಂಗ್ ಮತ್ತು ನ್ಯಾಯಾಂಗ ಕೌಶಲ್ಯ ಹೆಚ್ಚಳದ ಕುರಿತು ವಿಚಾರ ಸಂಕಿರಣದಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಮೋಹನ್ ಎಂ.ಶಾಂತನುಗೌಡರ್, ಎಸ್.ಅಬ್ದುಲ್ ನಜೀರ್ ಮತ್ತು ಅಜ್ಜಿಕುಟಿರ ಸೋಮಣ್ಣ ಬೋಪಣ್ಣ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು ಭಾಗವಹಿಸಲಿದ್ದಾರೆ.
ವಿಚಾರ ಸಂಕಿರಣದಲ್ಲಿ ಆರ್ಥಿಕ ಕಾರ್ಯಕ್ಷಮತೆಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಪರಿಣಾಮ, ವೈಯಕ್ತಿಕ ಬೆಳವಣಿಗೆ, ಸಾಮಥ್ರ್ಯ ಹೆಚ್ಚಳ, ನ್ಯಾಯಾಂಗ ವ್ಯವಸ್ಥೆಯನ್ನು ಪರಿವರ್ತಿಸುವ ಹೊಸ ತಂತ್ರಜ್ಞಾನ, ನ್ಯಾಯಾಂಗ ಆಡಳಿತದಲ್ಲಿರುವ ಸವಾಲುಗಳೂ ಮತ್ತು ಪರಿಹಾರಗಳ ಕುರಿತು ಚರ್ಚೆಗಳು ನಡೆಯಲಿವೆ.
ಸಮಾರೋಪ ಸಮಾರಂಭದಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ, ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪಾಲ್ಗೊಳ್ಳಲಿದ್ದಾರೆ.