ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ನ್ಯಾಯಾಧೀಶೆ ಕೆ.ಜಿ ಶಾಂತಿ

ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ನ್ಯಾಯಾಧೀಶೆ ಕೆ.ಜಿ ಶಾಂತಿ Judge K.G. Shanthi inaugurates legal awareness workshop

 ಬಳ್ಳಾರಿ 06:  ಸಮಾಜದ ಅನಿಷ್ಟ ಪದ್ಧತಿಯಾದ ದೇವದಾಸಿ ಪದ್ಧತಿಯ ಸಂಪೂರ್ಣ ನಿರ್ಮೂಲನೆ ಮತ್ತು ವಿಕಲಚೇತನರ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ದೇವದಾಸಿ ಮಹಿಳೆಯರಿಗೆ ಮತ್ತು ವಿಕಲಚೇತನರಿಗೆ ಸರ್ಕಾರಿ ಸೌಲಭ್ಯಗಳ ಕುರಿತು ಕಾನೂನು ಅರಿವು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇಂದಿಗೂ ಚಾಲ್ತಿಯಲ್ಲಿರುವುದು ವಿಷಾದನೀಯ ಸಂಗತಿಯಾಗಿದ್ದು, ನಾವು ಅಭಿವೃದ್ಧಿ ಹೊಂದುತ್ತಿದ್ದೇವೆ. ಆದರೂ ಇಂದು ದೇವದಾಸಿ ಪದ್ಧತಿ ಹಾಗೆಯೇ ಉಳಿದಿದೆ. ದೇವರ ಹೆಸರಿನಲ್ಲಿ ಈ ಪದ್ಧತಿ ನಡೆಯುತ್ತಿರುವುದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕಿದೆ ಎಂದರು.ಶಿಕ್ಷಣದ ಕೊರತೆಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಸರ್ಕಾರ ಹಲವು ಕಾನೂನು ಜಾರಿಗೆ ತಂದಿದೆ. ಆದರೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸದ ಪರಿಣಾಮ, ಇದು ಇನ್ನೂ ಅಸ್ತಿತ್ವದಲ್ಲಿದೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಮಾಜಿ ದೇವದಾಸಿಯರಿಗೆ ಸರ್ಕಾರಿ ಸೌಲಭ್ಯಗಳು ದೊರೆಯದಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬಹುದು ಎಂದು ಸಲಹೆ ನೀಡಿದರು.

ದೇವದಾಸಿಯರು ಸಮಾಜದ ದೇವರ ಸೇವೆ ಮಾಡುವ ವರ್ಗದವರು, ಇವರಲ್ಲಿ ಮನೆ ಮಾಡಿರುವ ಮೌಢ್ಯತೆ, ಆರ್ಥಿಕವಾಗಿ ಹಿಂದುಳಿದವರು, ಅವಕಾಶ ವಂಚಿತರು, ಶೋಷಣೆಗೆ ತಲೆ-ತಲಾಂತರಗಳಿಂದ ಒಳಗಾದವರು, ಅಚಲವಾದ ನಂಬಿಕೆಯನ್ನು ಹೊಂದಿ ತಮ್ಮತನವನ್ನು ಕಳೆದುಕೊಂಡವರು ಆಗಿದ್ದಾರೆ. ದೇವದಾಸಿ ಎಂಬುದು ದೇವಾಲಯದಲ್ಲಿರುವ ದೇವತೆಗೆ ತನ್ನ ಜೀವನದುದ್ದಕ್ಕೂ ಪೂಜೆ ಮತ್ತು ಸೇವೆಗಾಗಿ ತನ್ನನ್ನು ತಾನು ಸಮರೆ​‍್ಣಗೊಂಡ ಹುಡುಗಿಗೆ ನೀಡಲಾಗುವ ಹೆಸರಾಗಿದೆ. ಚಲುವೆಯರಾದ ತರುಣಿಯರನ್ನು ನಿಯೋಜಿಸುತ್ತಿದ್ದದ್ದೂ ರೂಢಿಯಲ್ಲಿತ್ತು.

ಇದರಲ್ಲಿ ಮಹಿಳೆಯರು ದೇವರ ಸೇವೆಗಾಗಿ ದೇವಾಲಯಗಳಿಗೆ ಸಮರ​‍್ಿಸಲ್ಪಟ್ಟರೂ, ಪ್ರಾಯೋಗಿಕವಾಗಿ ಅವರು ಲೈಂಗಿಕ ಶೋಷಣೆ ಮತ್ತು ಸಾಮಾಜಿಕ ಹಿಂಸೆಗೆ ಗುರಿಯಾಗುತ್ತಾರೆ ಎಂದು ದೇವದಾಸಿ ಪದ್ಧತಿ ಹಿನ್ನೆಲೆ ಬಗ್ಗೆ ವಿವರಿಸಿದರು.ಮಾಜಿ ದೇವದಾಸಿ ಮಹಿಳೆಯರಿಗೆ ಹಲವಾರು ಸರ್ಕಾರದ ಸೌಲಭ್ಯಗಳಿದ್ದು, ಪುನರ್ವಸತಿ ಯೋಜನೆ (ನಿವೇಶನ/ಮನೆ), ಮಾಸಾಶನ, ಶಿಕ್ಷಣ, ತರಬೇತಿ ಮತ್ತು ಸ್ವಯಂ ಉದ್ಯೋಗ ಸೌಲಭ್ಯ, ಮಕ್ಕಳಿಗೆ ವಿದ್ಯಾರ್ಥಿವೇತನ, ಆರೋಗ್ಯ ಕಿಟ್ ಹಾಗೂ ವಿವಿಧ ದಾಖಲಾತಿಗಳನ್ನು ಸುಲಭಗೊಳಿಸಲಾಗಿದೆ. ಕುಟುಂಬದ ಸಮಗ್ರ ಪುನರ್ವಸತಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಇವುಗಳ ಸೌಲಭ್ಯ ಪಡೆದು ಉತ್ತಮ ಜೀವನ ನಡೆಸಿ ಮುಖ್ಯವಾಹಿನಿಗೆ ಬರಬೇಕು. ದೇವದಾಸಿ ಪದ್ಧತಿಯನ್ನು ಶ್ಯೂನಕ್ಕೆ ತರಲು ನಾವೆಲ್ಲರೂ ಪಣತೋಡಬೇಕು ಎಂದರು.ವಿಕಲಚೇತನರು ವಿಶೇಷ ಶಕ್ತಿ ಉಳ್ಳವರು, ಇವರು ಸಮಾಜದ ಒಂದು ಭಾಗವಾಗಿದ್ದು, ಅವರಿಗೆ ಪೋತ್ಸಾಹ ನೀಡಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಅವರಿಗಾಗಿ ವಿಶೇಷ ಕೂರುವ ವ್ಯವಸ್ಥೆ ಮತ್ತ ಉತ್ತಮ ಸೌಲಭ್ಯ ನೀಡಬೇಕು ಎಂದು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.2011ರ ಜನಗಣತಿಯ ಪ್ರಕಾರ ದೇಶದಲ್ಲಿ ಶೇ.2.91 ರಷ್ಟು ಹಾಗೂ ರಾಜ್ಯದಲ್ಲಿ ಶೇ.1.8 ರಷ್ಟು ಅಂಗವಿಕಲರಿದ್ದಾರೆ.

ವಿಕಲಚೇತನರಿಗೆ ಸರ್ಕಾರದಿಂದ ಹಲವು ಮೂಲಭೂತ ಸೌಲಭ್ಯಗಳಿವೆ. ಉದ್ಯೋಗದಲ್ಲಿ ಶೇ.04 ರಷ್ಟು ಮೀಸಲಾತಿ, ಉಚಿತ ಶಿಕ್ಷಣ, ಸ್ವ-ಉದ್ಯೋಗ ಇನ್ನೂ ಮುಂತಾದ ಸೌಲಭ್ಯಗಳನ್ನು ಪಡೆದು ಸಲಬರಾಗಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವದಾಸಿ ಪದ್ಧತಿಯು ಒಂದು ಸಾಮಾಜಿಕ ಅನ್ಯಾಯವಾಗಿದ್ದು, ಈ ಪದ್ಧತಿಯನ್ನು ಇಲ್ಲಿಗೆ ಕೊನೆಗೊಳಿಸಿ, ಸರ್ಕಾರ ಸೌಲಭ್ಯ ಪಡೆದು ಸುಂದರ ಜೀವನ ನಡೆಸಬೇಕು. ವಿಕಲಚೇತನರಿಗೆ ಪರಿಸರ ಸ್ನೇಹಿ ನಗರವನ್ನಾಗಿ ಮಾಡುವ ಉದ್ದೇಶ ನಮ್ಮದ್ದಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅವರಿಗಾಗಿ ಉತ್ತಮ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರು ಮಾತನಾಡಿ, ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿ ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರವು “ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಕಾಯ್ದೆ-2025” ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದರ ಮುಖ್ಯ ಉದ್ದೇಶ ದೇವದಾಸಿಯಾಗಿ ಸಮರ​‍್ಿಸುವುದನ್ನು ಅಪರಾಧ ಎಂದು ಪರಿಗಣಿಸಿವುದು ಹಾಗೂ ಪ್ರೋತ್ಸಾಹಿಸುವರಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿದೆ. ದೇವದಾಸಿ ಮಹಿಳೆಗೆ ಜನನದ ಮಗು ತನ್ನ ತಂದೆಯನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ, ಪಿತೃತ್ವ ಹಕ್ಕು ಮತ್ತು ಜೀವನಾಂಶದ ಹಕ್ಕು ನೀಡುವುದು, ಪುನರ್ವಸತಿ, ಶಿಕ್ಷಣ, ಉದ್ಯೋಗಾವಕಾಶಗಳು ಮತ್ತು ಸಾಮಾಜಿಕ ಗೌಪ್ಯತೆ ಒದಗಿಸುವುದಾಗಿದೆ ಎಂದರು. 

ಜಿಲ್ಲೆಯಲ್ಲಿ ದೇವದಾಸಿ ಮಹಿಳೆಯರ ಸಮೀಕ್ಷೆಗೆ 4,000 ಸಾವಿರ ಗುರಿಯನ್ನು ಹೊಂದಿದ್ದು, ಅದರಲ್ಲಿ ಇನ್ನೂ 600 ಕ್ಕಿಂತ ಹೆಚ್ಚು ಮಾಜಿ ದೇವದಾಸಿ ಮಹಿಳೆಯರು ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮೀಕ್ಷೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಅಭಿವೃದ್ಧಿ ನೀರೀಕ್ಷಕರು ಹಾಗೂ ಯೋಜನಾಧಿಕಾರಿ ಸುಧಾ.ಎಂ.ಚಿದ್ರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ದೇವದಾಸಿ ಮಹಿಳೆಯರಿಗೆ ಹಾಗೂ ವಿಕಲಚೇತನರಿಗೆ ಸರ್ಕಾರದಿಂದ ಇರುವ ಸೌಲಭ್ಯಗಳು ಮತ್ತು ವಿವಿಧ ಯೋಜನೆಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು.ಕಾರ್ಯಾಗಾರದಲ್ಲಿ  ಮಾಜಿ ದೇವದಾಸಿ ಮಹಿಳಾ ಫಲಾನುಭಾವಿಗಳಿಗೆ ವಿವಿಧ ಯೋಜನೆಯಡಿ ಚೆಕ್ ಹಾಗೂ ವಿಕಲಚೇತನರಿಗೆ ಹೊಲಿಗೆ ಯಂತ್ರ ಮತ್ತು ಬ್ರೈಲ್ ಕಿಟ್‌ಗಳನ್ನು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್‌.ಎನ್ ಹೊಸಮನೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಎಂ., ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್‌.ಎಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸವಿತಾ.ಸಿ ಸೇರಿದಂತೆ ಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರು, ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗ ಹಾಗೂ ವಿಕಲಚೇತನರು, ದೇವದಾಸಿ ಮಹಿಳೆಯರು, ಇತರರು ಉಪಸ್ಥಿತರಿದ್ದರು.