ಬೆಂಗಳೂರು, ಅ 11: ವಿಧಾನಮಂಡಲ ಅಧಿವೇಶನ ಕಲಾಪದ ವರದಿ ಮಾಡಲು ಖಾಸಗಿ ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮರಾಗಳು, ಪತ್ರಿಕೆಗಳ ಛಾಯಾಗ್ರಾಹಕರನ್ನು ದೂರವಿಟ್ಟಿರುವ ವಿಧಾನಸಭಾಧ್ಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಪತ್ರಕರ್ತರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಸ್ಪೀಕರ್ ನಡೆಯನ್ನು ತೀವ್ರವಾಗಿ ಖಂಡಿಸಿದವು.
ನಗರದ ಮೌರ್ಯವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಸ್ಪೀಕರ್ ವಿಧಾನಸಭೆ ಕಲಾಪದಿಂದ ಮಾಧ್ಯಮಗಳನ್ನು ಹೊರಗಿಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿದ್ದಾರೆ. ಸ್ಪೀಕರ್ ಅವರ ಧೋರಣೆ ಖಂಡನೀಯ. ವಿಧಾನಸಭೆಯ ವರದಿಗಾರಿಕೆಗೆ ಇನ್ನಿಲ್ಲದ ಕಟ್ಟಾಜ್ಞೆ ವಿಧಿಸಲಾಗಿದೆ. ಈ ಮೊದಲಿನಂತೆ ಪತ್ರಕರ್ತರಿಗೆ ಅವಕಾಶ ಕೊಡಬೇಕು.ಮಾಧ್ಯಮ ಸ್ವಾತಂತ್ರವನ್ನು ಕಸಿದುಕೊಳ್ಳಬಾರದು ಎಂದರು.
ಆದಷ್ಟು ಬೇಗ ಸ್ಪೀಕರ್ ತಮ್ಮ ಆದೇಶ ಹಿಂಪಡೆಯದೇ ಹೋದಲ್ಲಿ ಮತ್ತೆ ಪತ್ರಕರ್ತರೆಲ್ಲ ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಎಂದು ಶಣೈ ಎಚ್ಚರಿಸಿದರು.
ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಮಾತನಾಡಿ, ಸ್ಪೀಕರ್ ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೆಂದೂ ಯಾವುದೇ ಸ್ಪೀಕರ್ ಗಳು ಮಾಧ್ಯಮಗಳನ್ನು ಹೀಗೆ ಹೀನಾಯವಾಗಿ ನಡೆಸಿಕೊಂಡಿರಲಿಲ್ಲ. ಆದರೆ ಇಂದು ಪತ್ರಕರ್ತರು ಬೀದಿಗೆ ಬಂದು ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಸ್ಪೀಕರ್ ನಡೆ ಖಂಡನೀಯ ಎಂದರು.
ಹಿರಿಯ ಪತ್ರಕರ್ತ ಆರ್ಟಿ.ವಿಠ್ಠಲ್ ಮೂರ್ತಿ ಮಾತನಾಡಿ, ಅರಸೊತ್ತಿಗೆ ಮೂಲಗಳು ಎಲ್ಲೆಲ್ಲಿವೆ ಹುಡುಕಬೇಕಿದೆ. ಕಾಗೇರಿಯವರನ್ನು ತಾವು ಬಹಳ ಹಿಂದಿನಿಂದ ನೋಡುತ್ತಿದ್ದು, ಹಿಂದಿನ ಕಾಗೇರಿ ಈಗಿಲ್ಲ. ಸ್ಪೀಕರ್ ಕಾಗೇರಿಯವರ ಮುಖ ನಾಗವಲ್ಲಿ ರೀತಿ ಆಗಿದೆ ಎಂದು ಕಿಡಿಕಾರಿದರು.
ಪ್ರಜಾಸತ್ತಾತ್ಮಕವಾಗಿ ಸ್ಪೀಕರ್ ನಡೆದುಕೊಳ್ಳುತ್ತಿಲ್ಲ. ಇದನ್ನು ಬೆಂಗಳೂರಿನ ವರದಿಗಾರರ ಕೂಟ ವ್ಯಾಪಕವಾಗಿ ಖಂಡಿಸುತ್ತದೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಸರ್ಕಾರ ಮತ್ತು ಸ್ಪೀಕರ್ ಗೆ ಎಚ್ಚರಿಕೆ ನೀಡಿದರು.
ವಿಧಾನ ಸೌಧ ನಿರ್ಮಿಸುವಾಗ ಅದರ ನಿರ್ಮಾತೃ ಕೆಂಗಲ್ ಹನಿಮಂತಯ್ಯ ಅವರು ಇಟ್ಟುಕೊಂಡಿದ್ದ ಆಶಯವನ್ನು ರಾಜಕಾರಣಿಗಳು ಮರೆಯಬಾರದು. ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಸ್ಪೀಕರ್ ಕಾಗೇರಿ ಅವರ ನಿರ್ಧಾರವಲ್ಲ. ಕಾಗೇರಿಯವರ ನಿರ್ಧಾರದ ಹಿಂದೆ ಬೇರೆ ಶಕ್ತಿ ಇದೆ. ಕಾಗೇರಿಯವರ ಹೆಗಲ ಮೇಲೆ ಬಂದೂಕು ಇಟ್ಟು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಹೊಡೆಯುತ್ತಿದ್ದಾರೆ. ಇದಕ್ಕೆ
ಮಾಧ್ಯಮಗಳು ಮೊದಲ ಬಲಿಪಶುಗಳಾಗುತ್ತಿದ್ದಾರೆ. ಈ ರಾಜಕಾರಣಿಗಳು ವಿಧಾನ ಸಭೆಯಲ್ಲಿ ಏನು ಮಾಡಿದರೆಂದು ಜನತೆಗೆ ಗೊತ್ತಿದೆ. ಬಿಜೆಪಿಯವರು ಸದನದಲ್ಲಿ ಐತಿಹಾಸಿಕ ಸಿನಿಮಾ ವೀಕ್ಷಿಸಿರಲಿಲ್ಲ. ಅವರು ನೋಡಿದ್ದು ನೀಲಿಚಿತ್ರ. ಇದನ್ನು ಜನತೆಗೆ ತೋರಿಸಿದ್ದು ತಪ್ಪೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಗೆ ಸಾಥ್ ನೀಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಧ್ಯಮದ ಮಿತ್ರರು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.ಮಾಧ್ಯಮದವರನ್ನು ದೂರ ಇಡುವಂತಹ ಈ ರೀತಿಯ ತೀರ್ಮಾನ ಹಿಂದೆ ಯಾವ ಸಂದರ್ಭದಲ್ಲಿಯೂ ಆಗಿರಲಿಲ್ಲ. ಮಾಧ್ಯಮಗಳನ್ನ ಹತ್ತಿಕ್ಕುವ ಕೆಲಸವನ್ನು ತಾವು ಮುಖ್ಯಮಂತ್ರಿಯಾಗಿದ್ದಾಗ ಮಾಡಿರಲಿಲ್ಲ. ಅಧಿವೇಶನದಲ್ಲಿ ನಡೆಯುವುದನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗ. ಮಾಧ್ಯಮಕ್ಕೆ ಮುಕ್ತ ಅವಕಾಶ ಇರಬೇಕು. ಆದರೆ ಇದನ್ನು ಈ ಸರ್ಕಾರ ಮೊಟಕುಗೊಳಿಸಿದೆ. ಮಾಧ್ಯಮವನ್ನು ಬಹಿಷ್ಕರಿಸಿದ ಬಗ್ಗೆ ಸದನದಲ್ಲಿ ಧ್ಚನಿಯೆತ್ತುತ್ತಿದ್ದು, ಸ್ಪೀಕರ್ ಗೆ ಈ ಮಾಧ್ಯಮ ನಿಷೇಧವನ್ನ ಹಿಂಪಡೆಯಲು ಒತ್ತಾಯಿಸುವುದಾಗಿ ಹೇಳಿದರು.
ಈ ಸರ್ಕಾರವನ್ನು ನೋಡಿದರೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದದ್ದಂತೆ ಭಾಸವಾಗುತ್ತಿದೆ. ಬಿಜೆಪಿಯ ಎಲ್ಲಾ ನಿರ್ಧಾರಗಳು ಆರ್ ಎಸ್ ಎಸ್ ಆಣತಿಯಂತೆ ನಡೆಯುತ್ತಿದೆ ಎಂದನಿಸುತ್ತಿದೆ. ಮಾಧ್ಯಮ ನಿಷೇಧ ವಿಚಾರದಿಂದ ಹಿಡಿದು ಬಿಜೆಪಿ ತೆಗೆದುಕೊಳ್ಳುತ್ತಿರುವ ಎಲ್ಲಾ ನಿರ್ಧಾರಗಳು ಆರ್ ಎಸ್ ಎಸ್ ಆಣತಿಯಂತೆ ತೆಗೆದುಕೊಳ್ಳುವಂತೆ ಭಾಸವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಪೀಕರ್ ತೀರ್ಮಾನದ ವಿರುದ್ಧ ಛಾಯಾಚಿತ್ರಗ್ರಾಹಕರು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಗಾಂಧಿಪ್ರತಿಮೆ ಬಳಿ ಕೈಯಲ್ಲಿ ಕ್ಯಾಮರಾ ಹಿಡಿದು ಕುಳಿದು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಖಾಸಗಿ ಸುದ್ದಿವಾಹಿನಿಗಳ ಸಂಪಾದಕರು, ಮುಖ್ಯಸ್ಥರು, ಮಹಿಳಾಪತ್ರಕರ್ತರ ಸಂಘ,ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ರಾಷ್ಟ್ರೀಯ ಸುದ್ದಿವಾಹಿನಿಗಳ ವರದಿಗಾರರು, ದೃಶ್ಯಮಾಧ್ಯಮ ಹಾಗೂ ಮುದ್ರಣ ಮಾಧ್ಯಮದ ಹಲವರು ಪಾಲ್ಗೊಂಡಿದ್ದರು.
ಈ ಹಿಂದಿನ ವಿಧಾನಸೌಧದಲ್ಲಿ ಪತ್ರಕರ್ತರ ವರದಿ,ಪ್ರವೇಶಕ್ಕೆ ಮುಕ್ತ ಅವಕಾಶವನ್ನು ಮುಂದುವರೆಸಲು ಸರ್ಕಾರ ಹಾಗೂ ಸ್ಪೀಕರ್ ಅವರನ್ನು ಒತ್ತಾಯಿಸಲು ಒಂದಿಸಾಲಿನ ನಿರ್ಣಯವನ್ನು ಪ್ರತಿಭಟನೆಯಲ್ಲಿ ಕೈಗೊಳ್ಳಲಾಯಿತು.