ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಪತ್ರಕರ್ತ ರಫೀ ಭಂಡಾರಿ ದತ್ತಿ ನಿಧಿ ಸ್ಥಾಪನೆ

ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಪತ್ರಕರ್ತ ರಫೀ ಭಂಡಾರಿ ದತ್ತಿ ನಿಧಿ ಸ್ಥಾಪನೆ Journalist Rafi Bhandari Endowment Fund established at Women's University Journalism Department

ಲೋಕದರ್ಶನ ವರದಿ 

ವಿಜಯಪುರ 25 :  ಪತ್ರಿಕೋದ್ಯಮವು ಕೇವಲ ಶೈಕ್ಷಣಿಕ ವಿಷಯವಲ್ಲ, ಜೀವನ ಮೌಲ್ಯಗಳನ್ನು ಕಲಿಸುವ ಕ್ಷೇತ್ರವೂ ಆಗಿದ್ದು, ವಿದ್ಯಾರ್ಥಿನಿಯರು ಈ ದತ್ತಿ ನಿಧಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಫಿ ಭಂಡಾರಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಹಾಗೂ ಹಿರಿಯ ಪತ್ರಕರ್ತ ರಫಿ ಭಂಡಾರಿ ದತ್ತಿ ನಿಧಿ ಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಸಮಾಜದಲ್ಲಿರುವ ವಿವಿಧ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿ ಎಂದರು. ಒಳ್ಳೆಯ ಪತ್ರಕರ್ತರಾಗಿ ಸೇವೆ ಮಾಡಲು ಬಯಸಿದ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದರು. ಮಾಧ್ಯಮದಲ್ಲಿ ಅವಕಾಶಗಳು ವಿಪುಲ ಅದನ್ನು ದೈರ್ಯದಿಂದ ನಿಭಾಯಿಸಬೇಕು. ಸಮಾಜದಲ್ಲಿ ಹಲವಾರು ಸಮಸ್ಯೆಗಳು ಇದ್ದು ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿರಬೇಕು ಎಂದರು. 

ಇದೇ ಸಂದರ್ಭದಲ್ಲಿ ಪ್ರಜಾವಾಣಿ ದಿನಪತ್ರಿಕೆಯ ಮುಖ್ಯ ವರದಿಗಾರ ಬಸವರಾಜ ಸಂಪಳ್ಳಿ ಮಾತನಾಡಿ, ವ್ಯಕ್ತಿಯ ಕೆಲಸವೇ ಅವನಿಗೆ ಗೌರವ ಮತ್ತು ಸ್ಥಾನಮಾನ ತಂದುಕೊಡುತ್ತದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗಿಂತ ಕೌಶಲ್ಯಗಳಿಗೆ ಹೆಚ್ಚಿನ ಮಹತ್ವವಿದ್ದು, ಬರವಣಿಗೆ, ಸಂವಹನ ಹಾಗೂ ವೃತ್ತಿಪರ ನೈಪುಣ್ಯವೇ ಯಶಸ್ಸಿನ ಮೆಟ್ಟಿಲಾಗುತ್ತದೆ ಎಂದರು. ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದು, ಉತ್ತಮ ಬರಹದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಿದೆ. ವಿದ್ಯಾರ್ಥಿನಿಯರು ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಅವಕಾಶಗಳು ಕಡಿಮೆಯಾಗುತ್ತವೆ ಎಂಬ ಭಯವನ್ನು ವಿದ್ಯಾರ್ಥಿನಿಯರು ತೊರೆದುಬಿಡಬೇಕು.  

ತಂತ್ರಜ್ಞಾನದೊಂದಿಗೆ ತಮ್ಮ ಕೌಶಲ್ಯಗಳನ್ನು ಸಮನ್ವಯಗೊಳಿಸಿಕೊಂಡಾಗ ಹೊಸ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ. ಪತ್ರಿಕೋದ್ಯಮದಲ್ಲಿ ಯಶಸ್ಸು ಸಾಧಿಸಲು ಪ್ರಾಮಾಣಿಕತೆ, ನೈತಿಕತೆ ಮತ್ತು ವೃತ್ತಿಪರ ಬದ್ಧತೆ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬ ಪತ್ರಕರ್ತನು ತನ್ನ ಆತ್ಮಸಾಕ್ಷಿಗೆ ತಾನೇ ಉತ್ತರದಾಯಿಯಾಗಿರಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ಕೋಲಾರ ಹಾಗೂ ಡಾ. ಸಂದೀಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಶ್ವೇತಾ ಸ್ವಾಗತಿಸಿದರು. ಪವಿತ್ರ ಹಾಗೂ ನೀಲಮ್ಮ ಅತಿಥಿಯರನ್ನು ಪರಿಚಯಿಸಿದರು. ಭಾಗ್ಯ ನಿರೂಪಿಸಿದರು. ವರ್ಷ ವಂದಿಸಿದರು.