ಪತ್ರಕರ್ತ, ಆರ್ ಎಸ್ ಎಸ್ ಸಿದ್ಧಾಂತಿ, ಎಸ್. ಗುರುಮೂರ್ತಿ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ದಾಳಿಗೆ ಯತ್ನ

ಚೆನ್ನೈ, ಜ ೨೭, “ತುಘಲಕ್”  ತಮಿಳು  ನಿಯತಕಾಲಿಕೆ ಸಂಪಾದಕ ಹಾಗೂ ಆರ್ ಎಸ್ ಎಸ್   ಸಿದ್ಧಾಂತಿ   ಎಸ್. ಗುರುಮೂರ್ತಿ  ಅವರ  ನಿವಾಸದ ಮೇಲೆ  ಯುವಕರ  ಗುಂಪೊಂದು  ಪೆಟ್ರೋಲ್ ಬಾಂಬ್  ಎಸೆಯುವ ಪ್ರಯತ್ನವನ್ನು   ಪೊಲೀಸರು ಭಾನುವಾರ  ಬೆಳಗಿನ ಜಾವ ವಿಫಲಗೊಳಿಸಿದ್ದಾರೆ. ಆರು ಮಂದಿ  ಯುವಕರು ಭಾನುವಾರ ಬೆಳಗಿನ ಜಾವ  ದ್ವಿಚಕ್ರ ವಾಹನಗಳಲ್ಲಿ,    ಗುರುಮೂರ್ತಿ   ಅವರ  ನಿವಾಸದ ಬಳಿ ತೆರಳಿದ್ದರು.  ಈ ಪೈಕಿ ಒಬ್ಬ  ತನ್ನ ಬ್ಯಾಗಿನಿಂದ ಪೆಟ್ರೋಲ್ ಬಾಂಬ್ ತೆಗೆದು  ಗುರುಮೂರ್ತಿ ನಿವಾಸ ಮೇಲೆ  ಎಸೆಯಲು ಯತ್ನಿಸುತ್ತಿದ್ದ,   ಆ ಸಂದರ್ಭದಲ್ಲಿ  ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ  ಪೊಲೀಸ್ ಪೇದೆಯೊಬ್ಬರು  ಅದನ್ನು ಗಮನಿಸಿ, ಯವಕರನ್ನು ಹಿಡಿಯಲು ಯತ್ನಿಸಿ,   ತಕ್ಷಣವೇ ಮೈಲಾಪುರ್  ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಕೂಡಲೇ ಧಾವಿಸಿದ  ಡಿಸಿಪಿ  ತನಿಖೆ ನಡೆಸಿದ್ದರು. ನಂತರ ಈ ಘಟನೆಯನ್ನು  ಎಸ್.  ಗುರುಮೂರ್ತಿ   ಟ್ವೀಟರ್ ನಲ್ಲಿ  ದೃಢಪಡಿಸಿದ್ದಾರೆ. ತಾವು ೧೯೮೬ರಿಂದ  ಬೆದರಿಕೆಗೆ  ಸಂಬಂದಿಸಿದ  ಸಮಸ್ಯೆ  ಎದುರಿಸುತ್ತಿರುವುದಾಗಿ, ಭಾನುವಾರ ಬೆಳಗಿನ ಜಾವ ನಡೆದ  ಘಟನೆ ಹಿನ್ನಲೆಯಲ್ಲಿ ತಮ್ಮ ಸುರಕ್ಷತೆ ಹಾಗೂ ಯೋಗಕ್ಷೇಮದ ಬಗ್ಗೆ  ಕಾಳಜಿ ವಹಿಸಿದ ಎಲ್ಲರಿಗೂ  ಧನ್ಯವಾದ ಸಲ್ಲಿಸಿದ್ದಾರೆ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ೧೯೭೧ರಲ್ಲಿ   ಸೇಲಂನಲ್ಲಿ  ನಡೆದಿದ್ದ  ಘಟನೆ ಸಂಬಂಧ  ತುಘಲಕ್   ತಮಿಳು ನಿಯತಕಾಲಿಕೆ  ತನ್ನ ಹಳೆಯ ಲೇಖನಗಳನ್ನು  ಮರು ಪ್ರಕಟಿಸುವ ಸಾಧ್ಯತೆಗಳ  ಹಿನ್ನಲೆಯಲ್ಲಿ  ಸಂಪಾದಕ ಗುರುಮೂರ್ತಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.  ಸುಮಾರು ೫೦ ವರ್ಷಗಳ ಹಿಂದೆ  ಸೇಲಂ ನಲ್ಲಿ   ಪೆರಿಯಾರ್ ನೇತೃತ್ವದಲ್ಲಿ ನಡೆದಿದ್ದ  ಮೂಢನಂಬಿಕೆ ವಿರೋಧಿ ಸಮಾವೇಶದಲ್ಲಿ  ಭಗವಾನ್ ಶ್ರೀರಾಮ ಹಾಗೂ ಸೀತಾ ದೇವಿಯ  ಬೆತ್ತಲೆ  ಪ್ರತಿಕೃತಿಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆಮಾಡಲಾಗಿತ್ತು ಎಂಬ ವಿಷಯ  ಪ್ರಸಕ್ತ  ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.ಗುರುಮೂರ್ತಿ ನಿವಾಸದ ಮೇಲೆ  ಭಾನುವಾರ ದಾಳಿ ನಡೆಸಲು ಯತ್ನಿಸಿದ ಯುವಕರನ್ನು ಪೊಲೀಸರು ಇನ್ನೂ ಬಂಧಿಸಬೇಕಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.