ಸಮೀಕ್ಷೆ ವರದಿಯಾಧಾರಿಸಿ ಬೆಳೆ ಪರಿಹಾರಕ್ಕೆ ಕ್ರಮ : ಜಿಲ್ಲಾಧಿಕಾರಿ ಡಾ.ಆನಂದ ಕೆ.

ಸಮೀಕ್ಷೆ ವರದಿಯಾಧಾರಿಸಿ ಬೆಳೆ ಪರಿಹಾರಕ್ಕೆ ಕ್ರಮ : ಜಿಲ್ಲಾಧಿಕಾರಿ ಡಾ.ಆನಂದ ಕೆ. Joint survey on crop loss in Doni river basin to be completed soon

ಡೋಣಿ ನದಿ ಪಾತ್ರದಲ್ಲಿನ ಬೆಳೆ ನಷ್ಟ ಕುರಿತು ಜಂಟಿ ಸಮೀಕ್ಷೆ ಶೀಘ್ರದಲ್ಲೇ ಪೂರ್ಣ 

ವಿಜಯಪುರ 30 : ಮುಂಗಾರು ಮಳೆ ಹಿನ್ನಲೆಯಲ್ಲಿ ಡೋಣಿ ನದಿ ತೀರದ ಪ್ರದೇಶದಲ್ಲಿನ ಕೃಷಿ ಭೂಮಿ ಪ್ರವಾಹಕ್ಕೊಳಗಾಗಿ ಅಂದಾಜು 5500 ಹೆಕ್ಟೇರ್ ಜಮೀನು ಮುಳುಗಡೆಯಾಗಿ ಬೆಳೆಗಳು ಹಾನಿಯಾಗಿದ್ದು, ಈ ಕುರಿತು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಶೀಘ್ರದಲ್ಲೇ ಜಂಟಿ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲಿದ್ದು, ವರದಿಯನುಸಾರ ಬೆಳೆ ನಷ್ಟವಾಗಿರುವ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ತಿಳಿಸಿದರು.  

ಡೋಣಿ ನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಶನಿವಾರ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು  ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರೊಂದಿಗೆ ಜಂಟಿಯಾಗಿ ಜಿಲ್ಲೆಯ ಸಾರವಾಡ, ದದಾಮಟ್ಟಿ, ಉಕುಮನಾಳ ಹಾಗೂ ಎಂಬತ್ನಾಳ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಅವರು ಪರೀಶೀಲನೆ ನಡೆಸಿ ಮಾತನಾಡಿದರು.  

ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಈಗಾಗಲೇ ಸ್ಥಳೀಯ ರೈತರು ಕೆಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಇವರ ಬೇಡಿಕೆಯನ್ವಯ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾಗುವ ಅನುದಾನ, ಸೂಕ್ತ ಯೋಜನೆ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು.  

ಡೋಣಿ ನದಿಯ ಪ್ರವಾಹ ನಿಯಂತ್ರಣಕ್ಕಾಗಿ ಅಂದಾಜು 7.5 ಕೋಟಿ ರೂ.ಗಳ ವಿಪತ್ತು ನಿರ್ವಹನಾ ಉಪಶಮನ ನಿಧಿಯಡಿ ಈಗಾಗಲೇ ಪಂಚಾಯತ್ ರಾಜ್ ಇಂಜೀನೀಯರಿಂಗ್ ವಿಭಾಗದಿಂದ  ಸೇತುವೆ ಮುಂಭಾಗ ಹಾಗೂ ಹಿಂಭಾಗದಲ್ಲಿನ ಒಂದು ಕಿ.ಮೀ. ಅಂತರದಲ್ಲಿ  ಹೂಳೂ ತೆಗೆಯುವುದು, ಗಿಡಗಂಟಿಗಳನ್ನು ತೆರವುಗೊಳಿಸುವುದು ಹಾಗೂ ಪಕ್ಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಅರಣ್ಯೀಕರಣ ಕಾಮಗಾರಿ ಸೇರಿದಂತೆ ಪ್ರವಾಹ ನಿಯಂತ್ರಣಕ್ಕಾಗಿ ಕಾಮಗಾರಿಗಳನ್ನು  ಕೈಗೆತ್ತಿಕೊಳ್ಳಲಾಗಿದ್ದು, ನವೆಂಬರ್ ಅಂತ್ಯದಲ್ಲಿ ಹೂಳು ತೆಗೆಯುವುದು, ಸೇತುವೆ ಪಾತ್ರದಲ್ಲಿ ಅರಣ್ಯೀಕರಣ ಕಾಮಗಾರಿ ಸಹ ಆರಂಭವಾಗಲಿದ್ದು, ಡೋಣಿನದಿ ಪ್ರವಾಹ ನಿಯಂತ್ರಣ ಕಾಮಗಾರಿಗಳನ್ನು ಆದ್ಯತೆಯಾಗಿ  ತೆಗೆದುಕೊಂಡು ಡೋಣಿ ನದಿಯಿಂದಾಗುವ ಸಮಸ್ಯೆಗಳನ್ನು ಅವಲೋಕಿಸಿ ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.   

ಈ ಸಂದರ್ಭದಲ್ಲಿ  ಕೃಷಿ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ,ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ,ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಪ್ರಶಾಂತ ಪೂಜಾರಿ  ತಹಶಿಲ್ದಾರರಾದ ಶಾಂತಲಾ ಚಂದನ, ರೈತರಾದ ಭೀಮಸೇನ, ಮಲ್ಲಿಕಾರ್ಜುನ ಭಟಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.