ಬೆಂಗಳೂರು, ಮಾ 19, ವಿಧಾನ ಸಭೆ ಉಪಸಭಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಇಬ್ಬರ ಪೈಪೋಟಿ ಆರಂಭವಾಗಿದ್ದು, ತಮ್ಮ ಜಿಲ್ಲೆಯ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಹುದ್ದೆಯ ಮೇಲೆ ಸವದತ್ತಿ ಕ್ಷೇತ್ರದ ಶಾಸಕ ಆನಂದ್ ಮಾಮನಿ ಸಹ ಕಣ್ಣಿಟ್ಟಿದ್ದು, ಸಚಿವ ಸ್ಥಾನ ವಂಚಿತ ತಮಗೆ ಈ ಹುದ್ದೆ ನೀಡಬೇಕೆಂದು ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಿದ್ದಾರೆ.
ಆದರೆ ಮತ್ತೊಬ್ಬ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಅವರಿಗೆ ಉಪಸಭಾಧ್ಯಕ್ಷ ಸ್ಥಾನ ನೀಡಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ಬಹು ವರ್ಷಗಳಿಂದ ತಮ್ಮ ಬೆಂಬಲಿಗ, ಹಿರಿಯ ಶಾಸಕರೂ ಆಗಿರುವ ಜ್ಞಾನೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜ್ಞಾನೇಂದ್ರ ಅವರಿಗೆ ಉಪಸಭಾಧ್ಯಕ್ಷ ಹುದ್ದೆ ದೊರಕಿಸಿಕೊಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಅರಗ ಜ್ಞಾನೇಂದ್ರ ಅವರನ್ನು ಯಡಿಯೂರಪ್ಪ ಇಂದು ಮನೆಗೆ ಕರೆಸಿ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದಾಗಿ ತಿಳಿಸಿದರು. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಜ್ಞಾನೇಂದ್ರ ಅನಿವಾರ್ಯವಾಗಿ ಮುಖ್ಯಮಂತ್ರಿ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.