ನವದೆಹಲಿ, ಫೆ ೨೮ : ಚೈನಾದಿಂದ ಮಾರಣಾಂತಿಕ ಕರೋನವೈರಸ್ ಜಗತ್ತಿನ ಹಲವು ದೇಶಗಳಿಗೆ ಹರಡಿರುವ ಹಿನ್ನಲೆಯಲ್ಲಿ ಭಾರತ ಸರ್ಕಾರ ಶುಕ್ರವಾರ ಪ್ರಮುಖ ತೀರ್ಮಾನ ಕೈಗೊಂಡಿದೆ.
ಜಪಾನ್, ದಕ್ಷಿಣ ಕೊರಿಯಾದಿಂದ ಬರುವ ಪ್ರಯಾಣಿಕರಿಗೆ ಕಲ್ಪಿಸಲಾಗಿದ್ದ ಆಗಮನ ವೀಸಾ ಸೌಲಭ್ಯವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ.
ಇಮಿಗ್ರೇಷನ್ ಬ್ಯೂರೋ ಹಾಗೂ ಗೃಹ ಸಚಿವಾಲಯ ಈ ಸಂಬಂಧ ಮಾಹಿತಿ ನೀಡಿವೆ. ಈ ನಡುವೆ ಚೈನಾದಲ್ಲಿ ಕರೋನವೈರಸ್ ಸೋಂಕಿನಿಂದ ೪೪ ಮಂದಿ ಹೊಸದಾಗಿ ಮೃತಪಟ್ಟಿದ್ದು, ಇದರೊಂದಿಗೆ ಮಾರಣಾಂತಿಕ ಸೋಂಕಿನಿಂದ ಸಾವಿನ ಸಂಖ್ಯೆ ೨,೭೮೮ ಕ್ಕೆ ಏರಿದೆ. ಚೈನಾದಲ್ಲಿ ಗುರುವಾರ ೪೩೩ ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕು ಪೀಡಿತರ ಸಂಖ್ಯೆ ೭೮,೮೨೪ ಕ್ಕೆ ಏರಿದೆ. ಹುಬೈ ಪ್ರಾಂತ್ಯದಲ್ಲಿ ಹೆಚ್ಚಿನ ಹೊಸ ಸೋಂಕು ಪ್ರಕರಣಗಳು ಮತ್ತು ಸಾವುಗಳು ಸಂಭವಿಸಿವೆ ಅಧಿಕಾರಿಗಳು ಹೇಳಿದ್ದಾರೆ.