ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದೆ ಜೈನ ಧರ್ಮ: ಸಚಿವ ಸತೀಶ

ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದೆ ಜೈನ ಧರ್ಮ: ಸಚಿವ ಸತೀಶ Jainism has made immense contributions to society: Minister Satish

ಜಮಖಂಡಿ 26: ಜೈನ ಧರ್ಮ, ವ್ಯಾಪಾರ, ಉದ್ಯೋಗ, ಕೃಷಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರವಾದ ಕೊಡುಗೆಗಳನ್ನು ನೀಡಿದೆ ಎಂದು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.  

ನಗರದ ಪೊಲೊ ಮೈದಾನದಲ್ಲಿ ನಡೆದ ದಕ್ಷಿಣ ಭಾರತ ಜೈನ ಸಭಾ ವೀರಸೇವಾದಳ, ಮಧ್ಯವರ್ತಿ ಸಮಿತಿ ಸಹಯೋಗದಲ್ಲಿ ಪ್ರಥಮಾಚಾರ್ಯ ಶಾಂತಿಸಾಗರ ಮಹಾರಾಜರ 70ನೇ ಪುಣ್ಯತಿಥಿ ಕಾರ್ಯಕ್ರಮದ ದಿ.ರಾವಸಾಹೇಬ ಅ. ಪಾಟೀಲ ಬೋರಗಾಂವಕರ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೈನ ಧರ್ಮ ವಿಶ್ವಕ್ಕೆ ಶಾಂತಿ, ಅಹಿಂಸೆಯನ್ನು ಸಾರುತ್ತ ಸಮಾಜದ ಒಳಿತಿಗೆ ಕಾರ್ಯನಿರ್ವಹಿಸುತ್ತ ಬಂದಿದೆ. ಹೊರರಾಜ್ಯಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಾ ಬಂದಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಜನಾ ಮತ್ತು ಸಾಂಖಿಕ ಸಚಿವ ಡಿ, ಸುಧಾಕರ ಮಾತನಾಡಿ, ಜೈನ ಧರ್ಮ ಅಹಿಂಸೆಯನ್ನು ಸಾರಿ ಅದರಂತೆ ನಡೆದುಕೊಂಡಿದೆ. ಮಹತ್ಮಾ ಗಾಂಧೀಜಿ ಅವರು ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಪಡೆಯಲು ಪ್ರೇರಣೆ ನೀಡಿದೆ ಎಂದರು.  

ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಜೈನಧರ್ಮದಿಂದ ಪ್ರಕೃರ್ತಿ ಉಳಿದಿದೆ. ಅಹಿಂಸೆಯ ಮಾರ್ಗದಿಂದ ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ದಯೆಯನ್ನು ಧರ್ಮ ಹೇಳಿದೆ. ಜೈನ ಧರ್ಮದ ಐದು ತತ್ವಗಳನ್ನು ಅಳವಡಿಸಿಕೊಂಡರೇ ವಿಶ್ವವೇ ಸುಂದರ ತೋಟದಂತೆ ಕಂಗೊಳಿಸುತ್ತದೆ. ಸಾಮಾಜಿಕ ಮೌಲ್ಯಗಳನ್ನು ನೀಡಿದ್ದಲ್ಲದೇ, ಅದರಂತೆ ನಡೆದು ತೋರಿಸಿದೆ ಎಂದರು. 

ಆಶ್ವಾಸನೆ : ಜೈನಧರ್ಮಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಲು ಮನವಿ ಸಲ್ಲಿಸಿದ್ದಾರೆ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಸಚಿವರುಗಳು ಆಶ್ವಾಸನೆಯನ್ನು ನೀಡಿದರು. 

ಹಸ್ತದ ಚಿನ್ಹೆ : ಮಾಜಿ ಸಚಿವ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಜೈನ ಧರ್ಮ ನಶಿಸಿ ಹೋದ ಸಂದರ್ಭದಲ್ಲಿ ಶಾಂತಿಸಾಗರ ಮಹಾರಾಜರು ಪುನರುತ್ಥಾನ ಮಾಡಿದರು. ತತ್ವ ಸಿದ್ಧಾಂತಗಳನ್ನು ಅವುಗಳ ಹಿರಿಮೆಯನ್ನು ಸಾರಿದರು. ಕಠಿಣ ತಪಸ್ಸು ಪರಿಶ್ರಮದಿಂದ ಆತ್ಮೋದ್ಧಾರದ ಮಾರ್ಗವನ್ನು ತೋರಿಸಿಕೊಟ್ಟರು. ಹಿಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅಥಣಿ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಜನಿಸಿದ ನಿತ್ಯಾನಂದ ಮುನಿ ಮಹಾರಾಜರು ಹಸ್ತದ ಚಿನ್ಹೆಯನ್ನು ಬಳಸಲು ತಿಳಿಸಿದ್ದರು. ಅಂದಿನಿಂದ ಕಾಂಗ್ರೆಸ್‌ನ ಗುರುತು ಹಸ್ತದ ಚಿನ್ಹೆಯಾಗಿದೆ ಎಂದು ನೆನಪಿಸಿಕೊಂಡರು. 

ಧರ್ಮಸ್ಥಳದ ವಿಚಾರವಾಗಿ ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಧಾರ್ಮಿಕ ಭಾವನೆಗೆ ಧಕ್ಕೆ ತರುವವರ ವಿರುದ್ಧ ಕ್ರಮ ಜರುಗಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಜೈನ ಸಮಾಜದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು. 

ಸರಕಾರಕ್ಕೆ ಒತ್ತಾಯ: ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಿ. ಧರ್ಮಾಧಿಕಾರಿಗಳ ಹೆಸರು ಕೆಡಿಸಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಕಲಿ ಯುಟ್ಯೂಬರ್‌ನನ್ನು ಬಂಧಿಸಬೇಕು. ಅಲ್ಪಸಂಖ್ಯಾತರ ನಿಗಮದಲ್ಲಿ ಮುಸ್ಲಿಂ, ಸಿಖ, ಪಾರಸಿ, ಜೈನ ಹೀಗೆ ಐದು ಸಮುದಾಯಗಳಿದ್ದು ಜೈನಧರ್ಮಕ್ಕೆ ಹೆಚ್ಚಿನ ಅನುದಾನ ಬರುವದಿಲ್ಲ. ಆದ್ದರಿಂದ ಪ್ರತ್ಯೇಕ ನಿಗಮ ರಚಿಸಲು ಸರ್ಕಾರ ಮುಂದಾಗಬೇಕೆಂದು ಸರಕಾರವನ್ನು ಒತ್ತಾಯಿಸಿದರು. ಸಮಾಜ ಒಗ್ಗಟ್ಟಾಬೇಕು ಸಮಾಜದ ವಿರುದ್ಧ ಷಡ್ಯಂತ್ರಗಳು ನಡೆದಾಗ ಧ್ವನಿ ಎತ್ತುವ ಕೆಲಸವಾಗಬೇಕು, ತುಷ್ಠಿಕರಣದ ರಾಜಕಾರಣ ಇರಬಾರದು ಎಂದು ಅಭಿಪ್ರಾಯ ಪಟ್ಟರು.  

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ವಿಜಯಸೌಹಾರ್ಧ ಬ್ಯಾಂಕ್‌ನ್ನು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರು ಉದ್ಘಾಟಿಸಿದ್ದರು ಎಂದು ನೆನಪಿಸಿಕೊಂಡರು.  

ಬೀಳಗಿ ಶಾಸಕ ಜೆ.ಟಿ.ಪಾಟೀಲ, ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿದರು. ಓಲೆಮಠದ ಆನಂದ ದೇವರು,  ನಾಂದಣಿ ಸಂಸ್ಥಾನ ಮಠದ ಜನಸೇನಾ ಭಟ್ಠಾರಕ ಪಟ್ಟಾಚಾರ್ಯರು, ವರೂರು ನವಗ್ರಹತೀರ್ಥದ ಧರ್ಮಸೇನಾ ಭಟ್ಟಾರಕರು. ಸೋಂದಾ ಮಠದ ಭಟ್ಟಾಲಂಕ ಸ್ವಾಮಿಗಳು, ಕೊಲ್ಹಾಪುರದ ಲಕ್ಷ್ಮಿಸೇನಾ ಭಟ್ಟಾರಕ ಸ್ವಾಮಿಗಳು ಆಶೀರ್ವಚನ ನೀಡಿದರು. 

ಸದಲಗಾ ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಿ,ಎಸ್‌.ನ್ಯಾಮಗೌಡ, ಬೆಳಗಾವಿ ಶಾಸಕ ಅಭಯ ಪಾಟೀಲ, ಮಾಜಿ ಸಚಿವ ಎಸ್‌.ಆರ್‌.ಪಾಟೀಲ, ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ. ಸಹಕಾರ ರತ್ನ ಉತ್ತಮ ಪಾಟೀಲ, ಬಿ.ಎಸ್‌. ಸಿಂದೂರ, ವೀರ ಸೇವಾದಳ ಸಮಿತಿಯ ಅಧ್ಯಕ್ಷ ಬಾಲಚಂದ್ರ ಪಾಟೀಲ, ವಿಜಯ ಪಾಟೀಲ, ಅಭಿನಂದನ ಪಾಟೀಲ, ರಾವಸಾಹೇಬ ಪಾಟೀಲ, ಜೈನ ಸಮಾಜದ ಮುಖಂಡರು ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಭಾವನಾ ಬೆಳಗಲಿ ಪ್ರಾರ್ಥನೆ ಮಾಡಿದರು, ಬಾಹುಬಲಿ ಉಪಾಧ್ಯೆ ಶಾಂತಿ ಮಂತ್ರ ವಾಚಿಸಿದರು, ಅರುಣ ಕುಮಾರ ಶಹಾ ಸ್ವಾಗತಿಸಿದರು. ಅಜೀತಕುಮಾರ ಭಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಧಮಾನ ನ್ಯಾಮಗೌಡ ವಂದಿಸಿದರು. 

ಮೆರವಣಿಗೆ;  

ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಹಳೇಯ ತಹಸೀಲ್ದಾರ ಕಚೇರಿಯಿಂದ ಭವ್ಯವಾದ ಮೆರವಣಿಗೆ ನಡೆಸಲಾಯಿತು. ನೂರಾರು ಜನ ಜೈನ ಸಮಾಜದ ಯುವಕರು ಬೈಕ್‌ರ್ಯಾಲಿ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೊಲೊ ಮೈದಾನ ತಲುಪಿತು. ಮೈದಾನದಲ್ಲಿ ಧರ್ಮಧ್ವಜವನ್ನು ಹಾರಿಸಿ ನಮನ ಸಲ್ಲಿಸಲಾಯಿತು.