ಶಿರಗುಪ್ಪಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಶಿರಗುಪ್ಪಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ  Villagers demand action against Shiraguppi Government High School Headmaster

ಲೋಕದರ್ಶನ ವರದಿ 

ಕಾಗವಾಡ  31: ಶಿಕ್ಷಕರ ನಡುವಿನ ಹೊಂದಾಣಿಕೆ ಸಮಸ್ಯೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ, ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪಾಲಕರು ಮನವಿ ಸಲ್ಲಿಸಿದ್ದಾರೆ.  ಈ ಕುರಿತು ಡಿಡಿಪಿಐ ಆರ್‌.ಎಸ್‌. ಸಿತಾರಾಮ ಹಾಗೂ ಕಾಗವಾಡ ಬಿಇಒ ಚನ್ನಿಗರಾಮಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.  

ಈ ವೇಳೆ ಮಾತನಾಡಿದ ಪಾಲಕ ಬಾಲು ವಡ್ಡರ, “ಶಿರಗುಪ್ಪಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರು ಅದೇ ಶಾಲೆಯ ಸಹ ಶಿಕ್ಷಕರ ವಿರುದ್ಧ ದೂರು ನೀಡಲು ವಿದ್ಯಾರ್ಥಿಗಳ ಪಾಲಕರನ್ನು ಪ್ರೇರೇಪಿಸುತ್ತಿದ್ದಾರೆ. ಶಾಲೆಯ ಗಣಿತ ಶಿಕ್ಷಕರು ಕನ್ನಡ ಮಾಧ್ಯಮದಲ್ಲಿ ಉತ್ತಮವಾಗಿ ಪಾಠ ಬೋಧಿಸುತ್ತಿದ್ದು, ಅವರ ವಿರುದ್ಧ ಯಾವುದೇ ದೂರುಗಳಿಲ್ಲ. ಆದರೆ ಮುಖ್ಯಶಿಕ್ಷಕರು ಸ್ವಜನಪಕ್ಷಪಾತ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.  

“ಮುಖ್ಯಶಿಕ್ಷಕರು ಕಳೆದ 15 ವರ್ಷಗಳಿಂದ ಇದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದರು.  ಈ ಹಿಂದೆ ಶಾಸಕ ರಾಜು ಕಾಗೆ ಅವರು ಜಿಲ್ಲಾ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ, ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ಮಹಾದೇವ ಉದಗಾಂವ, ದೀಪಕ್ ಕಾಂಬಳೆ, ಅಶೋಕ್ ಕಾಂಬಳೆ, ಮಹಾಂತೇಶ ವರಾಳೆ, ನಿತಿನ್ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.