ಜೈ-ಜನನಿ ಜೀವನದಲ್ಲಿ ಪ್ರೀತಿ, ಪ್ರೇಮ, ದ್ವೇಷ, ಒಲವಿನ ಸಮ್ಮಿಲನ

ಅವನೊಬ್ಬ ಅನಾಥ. ತಾಯಿ ಸೇಡಿಗೋಸ್ಕರ ಮನುಷ್ಯನಾಗಿ ಬದುಕಿರುವುದಕ್ಕಿಂತ ಸಮಾಜದಲ್ಲಿ ಮೃಗವಾಗಿ ಬದುಕಿದ್ದೆ ಹೆಚ್ಚು. ಅಂತವನನ್ನು ತುಂಬಾ ಇಷ್ಟ ಪಡೋ ಜೀವ ಅಂದ್ರೆ ಅದು ಜನನಿ (ಸ್ಟೆಫಿ ಪಟೇಲ್). ತನ್ನ ಹುಡುಗಿಯ ಕೈಹಿಡಿದನೆಂಬ ಕಾರಣಕ್ಕೆ ರೌಡಿಯೊಬ್ಬನ ಕೈ ಕತ್ತಿರಿಸುವಷ್ಟು ಜೈ (ವಸಿಷ್ಠ ಸಿಂಹ) ಕ್ರೂರಿ ಹಾಗೂ ಪ್ರೀತಿ ಮಾಡುವ ಪ್ರೇಮಿ. ಜನನಿ ತಂದೆ (ಅಚ್ಚುತ್ ಕುಮಾರ್) ಜೈ ಮತ್ತು ಜನನಿ ಪ್ರೀತಿ ಗೊತ್ತಾಗಿ ಬೇರೆ ಹುಡುಗನ ಜೊತೆ ಜನನಿಯ ಮದುವೆಗೆ ಮುಂದಾಗಿರುತ್ತಾನೆ. ಆದರೆ ಜನನಿ ತನ್ನ ಮನೆಯವರನ್ನು ಬಿಟ್ಟು ಜೈ ಜೊತೆ ಬರುತ್ತಾಳೆ. ಹೀಗೆ ಬಂದ ಹುಡುಗಿಗಾಗಿ ತಾನು ಮಾಡುತ್ತಿದ್ದ ಎಲ್ಲ ಕೆಟ್ಟಕೆಲಸಗಳನ್ನು ತ್ಯಾಗ ಮಾಡಿದ ಜೈ, ದೂರದ ಸಮುದ್ರ ದಡದಲ್ಲಿ ನಿರ್ಮಿಸಲಾದ ಸುಂದರ ಮನೆಗೆ ಹೋಗಿ ಹೊಸ ಬದುಕು ಕಟ್ಟಿಕೊಳ್ಳುತ್ತಾನೆ. ಇಬ್ಬರಲ್ಲು ಬೆಟ್ಟದಷ್ಟು ಪ್ರೀತಿ, ವಿಶ್ವಾಸ. ಜೀವನಕ್ಕಾಗಿ ಜೈ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಶುರು ಮಾಡುತ್ತಾನೆ. ಆಫೀಸ್‌ನಲ್ಲಿ ನಡೆಯುವ ವಿಚಾರಗಳೆಲ್ಲ ಪ್ರೇಕ್ಷಕರನ್ನು ರಂಜಿಸುತ್ತವೆ. ಇಲ್ಲಿ ಬರುವ ಸಿರಿ (ಸಮೀಕ್ಷಾ) ಮೇಲೆ ಬಾಸ್ ಸೇರಿದಂತೆ ಒಂದಿಷ್ಟು ಹುಡುಗರ ಕಣ್ಣು ಇದ್ದರೆ ಸಿರಿ ಕಣ್ಣು ಮಾತ್ರ ಜೈ ಮೇಲೆ.  

ಹೀಗೆ ಸಾಗುವ ಕಥೆಯಲ್ಲಿ ಜನನಿ ಗರ್ಭಿಣಿ ಆಗುತ್ತಾಳೆ. ನಮ್ಮಿಬ್ಬರ ನಡುವೆ ಮಗು ಬಂದರೆ ಪ್ರೀತಿ ಕಡಿಮೆ ಆಗುತ್ತದೆ ಎಂಬ ಆಶಯದಲ್ಲಿ ಜೈ ಇರಬೇಕಾದರೆ, ಹೆಣ್ಣೊಬ್ಬಳ ತಾಯ್ತನದ ಸುಖವನ್ನು ಜನನಿ ವಿವರಿಸುತ್ತಾಳೆ. ಹೀಗೆ ಕಥೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಸಾಗುತ್ತದೆ. ಕೊನೆಯವರೆಗೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಷ್ಟು ಧಮ್ ಕಥೆಯಲ್ಲಿ ಮತ್ತು ಸ್ಕ್ರೀನ್ ಪ್ಲೇನಲ್ಲಿ ಇದೆ. ಚಿತ್ರ ನೋಡುವ ಪ್ರೇಕ್ಷಕನಿಗೆ ತಾನು ಕೊಟ್ಟ ಹಣಕ್ಕೆ ಮೋಸವಿಲ್ಲದಂತೆ ಸಿನಿಮಾ ಮೂಡಿ ಬಂದಿದೆ. ಆದರೆ ಸಿನಿಮಾ ನಿಧಾನಗತಿಯಲ್ಲಿ ಸಾಗುವುದು ಪ್ರೇಕ್ಷಕನಿಗೆ ಸ್ವಲ್ಪ ಕಿರಿ ಕಿರಿ ಮಾಡುತ್ತದೆ. ಈ ವಿಚಾರದಲ್ಲಿ ನಿರ್ದೇಶಕರು ಯೋಚಿಸಿ ಒಂದಿಷ್ಟು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಬಹುದಿತ್ತು. ಇದಿಷ್ಟನ್ನು ಬದಿಗೆ ಇಟ್ಟರೆ, ‘ಲವ್ ಲಿ’ ಒಂದು ಸುಂದರವಾದ ಫ್ಯಾಮಿಲಿ ಸಿನಿಮಾ ಎನ್ನಬಹದು. ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಪ್ರೀತಿ, ಪ್ರೇಮ, ಒಲವಿನ ಕಥೆ ಹೇಳಿ ಗೆದ್ದಿದ್ದಾರೆ. ಚಿತ್ರದ ದೃಶ್ಯಗಳು ಶ್ರೀಮಂತದಿಂದ ಕೂಡಿದ್ದು, ಚಿತ್ರದ ಅಂದವನ್ನು ಹೆಚ್ಚಿಸಿದೆ. ಕಥೆಗೆ ಎನೆಲ್ಲಾ ಬೇಕೋ ಅದೆಲ್ಲವನ್ನು ನಿರ್ಮಾಪಕರಿಂದ ಪಡೆಯುವಲ್ಲಿ ನಿರ್ದೇಶಕ ಗೆದ್ದಿದ್ದಾನೆ.  

ಇನ್ನು ಚಿತ್ರವನ್ನು ಸುಂದರ ಪರಿಸರ ಹಾಗೂ ಸೆಟ್‌ನಲ್ಲಿ ಚಿತ್ರೀಕರಣ ಮಾಡಿದ್ದು, ಕಲರ್‌ಫುಲ್ ಆಗಿ ಬಂದಿದೆ. ಇದರಲ್ಲಿ ಛಾಯಾಗ್ರಹಕರ ಹಾಗೂ ಕಲಾ ನಿರ್ದೇಶಕರ ಕೈ ಚಳಕ ಎದ್ದು ಕಾಣುತ್ತದೆ. ಸಂಗೀತದ ವಿಷಯಕ್ಕೆ ಬಂದರೆ ಅನೂಪ್ ಸೀಳಿನ ಸುಂದರ ಹಾಡುಗಳ ಜೊತೆಗೆ ಬ್ಯಾಗರೌಂಡ್ ಸಂಗೀತವನ್ನು ಅದ್ಭುತವಾಗಿ ನೀಡಿದ್ದಾರೆ. ಎಲ್ಲಾ ಸಿನಿಮಾಗಳ ಹೊಡೆದಾಟದ ದೃಶ್ಯಗಳಲ್ಲಿ ಗ್ಲಾಸ್ ಒಡೆದ, ಟೆಬಲ್ ಮುರಿದ ಮುಂತಾದ ಸೌಂಡ್‌ಗಳು ಬರುತ್ತವೆ. ಆದರೆ ‘ಲವ್ ಲಿ’ ಆ್ಯಕ್ಷನ್ ದೃಶ್ಯಗಳಲ್ಲಿ ಒಳ್ಳೆಯ ಸಾಂಗ್ ಕೇಳಬಹುದು. ಈ ಹೊಸ ಪ್ರಯತ್ನ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ಇನ್ನು ಕಲಾವಿದರ ವಿಷಯಕ್ಕೆ ಬಂದರೆ, ನಾಯಕ-ನಾಯಕಿಯಾಗಿ ವಸಿಷ್ಠ ಸಿಂಹ ಹಾಗೂ ಸ್ಟೆಫಿ ಪಟೇಲ್ ಅಭಿನಯ ಚನ್ನಾಗಿದ್ದು, ಒಳ್ಳೆಯ ಸ್ಕೋರ್ ಮಾಡಬಲ್ಲರು. ಜೊತೆಗೆ ಸಹ ನಟಿ ಸಮೀಕ್ಷಾ, ದತ್ತಣ್ಣ, ಸಾಧುಕೋಕಿಲ, ಮಾಳವಿಕಾ, ಶೋಭರಾಜ್, ಅಚ್ಯುತ್ ಕುಮಾರ್, ಕಾಕ್ರೋಜ್ ಸುಧಿ ಎಲ್ಲರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಯಿಸಿದ್ದಾರೆ. ಒಟ್ಟಿನಲ್ಲಿ ‘ಲವ್ ಲಿ’ ಒಂದು ಪ್ರೀತಿ, ಪ್ರೇಮ, ಒಲವು ಹಾಗೂ ಆ್ಯಕ್ಷನ್ ಇರುವ ಫ್ಯಾಮಿಲಿ ಕುಳಿತು ನೋಡುವಂತ ಸಿನಿಮಾ ಎನ್ನಬಹುದು.  

ಚಿತ್ರ: ಲವ್ ಲಿ 

ನಿರ್ಮಾಣ, ನಿರ್ಮಾಪಕರು: ಅಭುವನಸ ಕ್ರಿಯೇಷನ್ಸ್‌, ರವೀಂದ್ರ ಕುಮಾರ್ 

ನಿರ್ದೇಶನ: ಚೇತನ್ ಕೇಶವ್ 

ಸಂಗೀತ: ಅನೂಪ್ ಸೀಳಿನ 

ಛಾಯಾಗ್ರಹಣ: ಅಶ್ವಿನ್ ಕೆನಡಿ 

ತಾರಾಗಣ: ವಸಿಷ್ಠ ಸಿಂಹ, ಸ್ಟೆಫಿ ಪಟೇಲ್, ಸಮೀಕ್ಷಾ, ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭರಾಜ್, ಅಚ್ಯುತ್ ಕುಮಾರ್ ಮುಂತಾದವರು. 

ರೆಟಿಂಗ್‌: ***1/2