ಧಾರವಾಡ 24: 'ಅತ್ಯಂತ ಕಿರಿಯ ವಯಸ್ಸಿನಲ್ಲಿ ನಮ್ಮನ್ನಗಲಿದ ಜಗುಚಂದ್ರ ನಿರಂತರವಾಗಿ ರಂಗಭೂಮಿ ಚಟುವಟಿಕೆಗಳು ಸೇರಿದಂತೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಸಾಂಸ್ಕೃತಿಕ ಬದುಕಿನ ಭಾಗವಾಗಿದ್ದರು ಎಂದು ಡಾ.ಶಶಿಧರ ನರೇಂದ್ರ ಹೇಳಿದರು.
ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಥಿಯೇಟರ್ ಎಂಪೈರ್ ಕಲ್ಚರಲ್ ಫೋರಂ ಆಯೋಜಿಸಿದ್ದ 'ಕೆ.ಜಗುಚಂದ್ರ ನೆನಪಿನ ನಾಟಕೋತ್ಸವ'ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಂಗಭೂಮಿ ಒಂದು ಚಲನಶೀಲ ಕ್ಷೇತ್ರ. ಬದಲಾಗುತ್ತಿರುವ ಸಂದರ್ಭ ಮತ್ತು ಪ್ರೇಕ್ಷಕರ ಆದ್ಯತೆಗನುಗುಣವಾಗಿ ರಂಗಭೂಮಿಯಲ್ಲಿ ಹೊಸ ಪ್ರಯೋಗಗಳು ಬರಬೇಕಿದೆ ಎಂದರು.
ಕೆ.ಎಚ್.ನಾಯಕ್ ಮಾತನಾಡಿ, 'ಭೌತಿಕವಾಗಿ ಜಗುಚಂದ್ರ ನಮ್ಮೊಂದಿಗೆ ಇರದಿದ್ದರೂ, ಆತನ ಕೆಲಸಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾನೆ. ಆತನನ್ನು ನೆನಪಿಸಿಕೊಂಡು ನಾಟಕೋತ್ಸವ ನಡೆಯುತ್ತಿರುವುದೇ ಅದಕ್ಕೆ ಸಾಕ್ಷಿ ಎಂದರು.
ಕಲಾವಿದರು ತಮ್ಮ ಕಲಾಸೇವೆಯ ಜತೆ ವೈಯಕ್ತಿಕ ಬದುಕಿನೆಡೆಗೂ ಗಮನ ನೀಡಬೇಕು. ಜಗುಚಂದ್ರ ಕುಟುಂಬವನ್ನು ನಿರ್ಲಕ್ಷಿಸಿ, ಕಲಾಕ್ಷೇತ್ರದಲ್ಲೇ ತನ್ನನ್ನು ಅತಿಯಾಗಿ ತೊಡಗಿಸಿಕೊಂಡಿದ್ದರ ಪರಿಣಾಮ ಹಲವು ತೊಂದರೆಗಳನ್ನು ಜಗುಚಂದ್ರ ಅನುಭವಿಸಬೇಕಾಯಿತು' ಎಂದು ಹೇಳಿದರು.
ಶಂಕರ ಹಲಗತ್ತಿ, ಮಲ್ಲಪ್ಪ ಹೊಂಗಲ್, ಮಾತಾರ್ಂಡ ಕತ್ತಿ, ರಾಜ್ ಕವಡೆನವರ ಸೇರಿದಂತೆ ಹಲವು ರಂಗಾಸಕ್ತರು ಇದ್ದರು.
ನಂತರ ಬೆಳಗಾವಿಯ ರಂಗಸಂಪದ ತಂಡ ಡಾ.ಗಿರೀಶ ಕಾರ್ನಾಡರ 'ಧರ್ಮಪುತ್ರ ನಾಟಕ ಪ್ರದರ್ಶಿಸಿತು.