ಅಫ್ಘಾನಿಸ್ತಾನ, ಫೆ 18,ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರನ್ನು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ತಾಲಿಬಾನ್ ಉಗ್ರರ ಗುಂಪೊಂದು ಶೈಡೇ ಪ್ರದೇಶದ ಇಂಜಿಲ್ ಜಿಲ್ಲೆಯಲ್ಲಿ ನ್ಯಾಯಾಧೀಶ ಅಬ್ದುಲ್ ರಹೀಮ್ ಅಜೀಮಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಜೈಲಾನಿ ಫರ್ಹಾದ್ ಕ್ಸಿನ್ಹುವಾಗೆ ತಿಳಿಸಿದ್ದಾರೆ.
ಅಜಿಮಿ ಇಂಜಿಲ್ ಜಿಲ್ಲಾ ನ್ಯಾಯಾಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ನಡೆದ ಗುಂಡಿನ ದಾಳಿಯು ಇತ್ತೀಚಿಗೆ ಈ ಪ್ರದೇಶದಲ್ಲಿ ಗುರಿಯಾಗಿಸಿಕೊಂಡು ನಡೆದ ಭೀಕರ ದಾಳಿಗಳಲ್ಲಿ ಒಂದೆನಿಸಿದೆ. ವಾರಾಂತ್ಯದಲ್ಲಿ ದಕ್ಷಿಣ ಕಂದಹಾರ್ ಪ್ರಾಂತ್ಯದ ದಾಂಡ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಆಫ್ಘಾನಿಸ್ತಾನ ಸ್ವತಂತ್ರ ಮಾನವ ಹಕ್ಕುಗಳ ಆಯೋಗ (ಎಐಎಚ್ಆರ್ಸಿ) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಸಂಘರ್ಷ ಸಂಬಂಧಿತ ಘಟನೆಗಳಲ್ಲಿ 2,800 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 7,950 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.