ಹಿರಿಯ ಪತ್ರಕರ್ತ, ಕಲಾಕೌಮುದಿ ಪ್ರಧಾನ ಸಂಪಾದಕ ಎಂ.ಎಸ್.ಮಣಿ ನಿಧನ

ತಿರುವನಂತಪುರಂ, ಫೆ.18,ಮಲಯಾಳಂ ಪತ್ರಿಕೋದ್ಯಮದ ಪಿತಾಮಹ ಎಂದೇ ಖ್ಯಾತರಾಗಿದ್ದ ಕಲಾಕೌಮುದಿ ಪತ್ರಿಕೆಯ ಪ್ರಧಾನ ಸಂಪಾದಕ ಎಂ.ಎಸ್ ಮಣಿ ಅವರು ವಯೋಸಹನ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ಕುಮಾರಪುರಂನ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.ಅವರಿಗೆ 79 ವರ್ಷ ವಯಸ್ಸಾಗಿತ್ತು. ಪತ್ನಿ, ಡಾ.ಕಸ್ತೂರಿ ಮತ್ತು ಪುತ್ರರಾದ ಸುಕುಮಾರನ್ ಮತ್ತು ವಲ್ಸಮಣಿ ಸೇರಿ ಅಪಾರ ಸ್ನೇಹಿತರನ್ನು ಅಗಲಿದ್ದಾರೆ. ಬೆಳಗ್ಗಿನ ಜಾವ 3.30ಕ್ಕೆ ಅವರು ಕೊನೆಯುಸಿರೆಳೆದರು.ಮಣಿ ಅವರು, ಕೇರಳ ಕೌಮುಡಿ ದೈನಿಕದ ಸಂಸ್ಥಾಪಕ ಸಂಪಾದಕ ಕೆ.ಸುಕುಮಾರನ್ ಮತ್ತು ಮಾಧವಿ ಸುಕುಮಾರನ್ ದಂಪತಿಯ ಹಿರಿಯ ಪುತ್ರನಾಗಿದ್ದಾರೆ. ಮಾತ್ರವಲ್ಲ ಬರಹಗಾರ ಮತ್ತು ಪತ್ರಕರ್ತ ಸಿ.ವಿ.ಕುಂಙಿರಾಮನ್ ಅವರ ಮೊಮ್ಮಗನಾಗಿದ್ದಾರೆ.ಇಲ್ಲಿನ ಯೂನಿವರ್ಸಿಟಿ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದ ನಂತರ ಮಣಿ 1961 ರಲ್ಲಿ ಕೇರಳ ಕೌಮುದಿಯಲ್ಲಿ ಸ್ಟಾಫ್ ರಿಪೋರ್ಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

 1975ರಲ್ಲಿ ಅವರು ಕಲಾಕೌಮುದಿ ಪಬ್ಲಿಕೇಷನ್ ಸ್ಥಾಪಿಸಿದರು.ಮಣಿ 1962 ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ವರದಿಗಾರಿಕೆಯ ಮೂಲಕ ಪ್ರಸಿದ್ಧಿ ಪಡೆದರು. 1965 ರಲ್ಲಿ ತಿರುವನಂತಪುರಂಗೆ ಮರಳಿದ ನಂತರ ಅವರು ಕೇರಳ ಕೌಮುಡಿಯ ಸಂಪಾದಕೀಯ ವಿಭಾಗವನ್ನು ದೀರ್ಘಕಾಲ ಮುನ್ನಡೆಸಿದರು.ಕಲಾಕೌಮುದಿ ಮುಖ್ಯ ಸಂಪಾದಕ ಮಣಿ ಅವರು, ಭಾರತೀಯ ದಿನಪತ್ರಿಕೆ ಸೊಸೈಟಿ (ಐಎನ್ಎಸ್) ಸಮಿತಿಯ ಸದಸ್ಯರಾಗಿಯೂ ಮತ್ತು ಭಾರತ ಪತ್ರಿಕೆ ಸಂಪಾದಕರ ಸಮ್ಮೇಳನದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.