ಜೆಎನ್‌ಯು ಹಿಂಸಾಚಾರ; ವಾಟ್ಸಪ್‌ ಗ್ರೂಪ್‌ನ 34 ಮಂದಿಯನ್ನು ಪ್ರಶ್ನಿಸಲಿರುವ ಪೊಲೀಸರು

jnu

ನವದೆಹಲಿ, ಜ.14: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೂಪ್‌ನಲ್ಲಿ ಗಲಭೆಗೆ ಸಂಚು ರೂಪಿಸಿದ ಮೂವತ್ತನಾಲ್ಕು ಮಂದಿಗೆ ದೆಹಲಿ ಪೊಲೀಸರು ಶೀಘ್ರದಲ್ಲೇ ನೋಟಿಸ್ ನೀಡಲಿದ್ದು, ಈಗಾಗಲೇ ಎಂಟು ಜನರನ್ನು ಪ್ರಶ್ನಿಸಲಾಗಿದೆ.

ಇದಕ್ಕೂ ಮೊದಲು ದೆಹಲಿ ಪೊಲೀಸರು ಜನವರಿ 1 ಮತ್ತು 5 ರ ನಡುವೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರನ್ನು ಗುರುತಿಸಿದ್ದರು, ಅದರಲ್ಲಿ ಅವರು ಈಗಾಗಲೇ ಮೂರು ಜನರನ್ನು ಪ್ರಶ್ನಿಸಿದ್ದಾರೆ.ಈಗ 34 ಜನರಿಗೆ ನೋಟಿಸ್ ನೀಡಿದರೆ ಪೊಲೀಸರ ತನಿಖೆಗೆ ಒಳಪಡುವ ಒಟ್ಟು ಜನರ ಸಂಖ್ಯೆ 43 ಆಗಲಿದೆ.

ದೆಹಲಿ ಹೈಕೋರ್ಟ್, ಅರ್ಜಿಯನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ, ಎರಡು ವಾಟ್ಸಾಪ್ ಗ್ರೂಪ್‌ಗಳಲ್ಲಿದ್ದ ಜನರ ದೂರವಾಣಿ ಸಂಖ್ಯೆಗಳಿಂದ ಸಂದೇಶಗಳ ಬಗ್ಗೆ ಮಾಹಿತಿ ಪಡೆಯಲು ದೆಹಲಿ ಪೊಲೀಸರಿಗೆ ಸೂಚಿಸಿದೆ.

ಈ ಗುಂಪುಗಳ 34 ಜನರ ವಿಚಾರಣೆಗೆ ದೆಹಲಿ ಪೊಲೀಸರು ನೋಟಿಸ್ ನೀಡಲಿದ್ದಾರೆ ಎಂದು ಇಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.

ಈ 34 ಜನರಲ್ಲಿ ಖಾಸಗಿ ಟೆಲಿವಿಷನ್ ಚಾನೆಲ್‌ನ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ನಾಲ್ಕು ಜನರು ಕೂಡ ಇದ್ದಾರೆ.ಜೆಎನ್‌ಯು ಹಿಂಸಾಚಾರದ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಎಂಟು ಜನರನ್ನು ಪ್ರಶ್ನಿಸಲಾಗಿದೆ.