ಅನರ್ಹ ಶಾಸಕರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆತಿರುವುದು ದುರದೃಷ್ಟಕರ: ಸಿಪಿಐಎಂ ಟೀಕೆ

ಬೆಂಗಳೂರು, ನ 15  :    ಪ್ರಜಾಸತ್ತಾತ್ಮಕವಾಗಿ ರಚನೆಯಾಗಿದ್ದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರ ಉರುಳಿಸುವ ಬಿಜೆಪಿ ಸಂಚಿಗೆ ಕೈಜೋಡಿಸಿದ್ದ 17 ಶಾಸಕರ ರಾಜಿನಾಮೆ ತಿರಸ್ಕರಿಸಿ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದ್ದ ವಿಧಾನ ಸಭಾಧ್ಯಕ್ಷರ ನಿರ್ಣಯವನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿರುವುದು ಪ್ರಜಾಸತ್ತೆಗೆ ದೊರೆತ ಜಯ ಎಂದು ಸಿಪಿಐಎಂ ವರ್ಣಿಸಿದೆ. ಆದರೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆತಿರುವುದು ಪ್ರಜಾಪ್ರಭುತ್ವದ ಅಣಕ ಎಂದು ಟೀಕಿಸಿದೆ.  

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇದು ಪಕ್ಷ ಮತ್ತು ತಮನ್ನು ಆಯ್ಕೆ ಮಾಡಿದ್ದ ಜನರಿಗೆ ದ್ರೋಹ ಎಸಗಿ ಪಕ್ಷಾಂತರ ಮಾಡುವ ಜನಪ್ರತಿನಿಧಿಗಳಿಗೆ ಗುಣಪಾಠವಾಗಿದೆ. ಸಂವಿಧಾನದ 164(1ಃ) ಮತ್ತು 361(ಎ]ಯಂತೆ ಅನರ್ಹಗೊಂಡವರು ಹೊಸದಾಗಿ ಚುನಾಯಿತರಾಗುವವರೆಗೆ ಸಚಿವ ಪದವಿಯನ್ನಾಗಲೀ ಅಥವ ಯಾವುದೇ ರಾಜಕೀಯ ಹುದ್ದೆಗಳನ್ನು ಪಡೆಯಲು ಅವಕಾಶವಿಲ್ಲವೆಂದು ಕೋರ್ಟ್ ಸ್ಪಷ್ಟಪಡಿಸಿದೆ. ಅದೇ ರೀತಿ, ಕುದುರೆ ವ್ಯಾಪಾರದ ಮಾದರಿಯಲ್ಲಿ ಶಾಸಕರನ್ನು ಖರೀದಿಸುವ ಮತ್ತು ಪಕ್ಷಾಂತರದಂತಹ ಪ್ರಜಾಪ್ರಭುತ್ವ ವಿರೋಧಿ ಪ್ರಕ್ರಿಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಬಲಪಡಿಸುವ ಕುರಿತು ಕೋರ್ಟ್ ನೀಡಿರುವ ಸೂಚನೆಯೂ ಸಹ ಸ್ವಾಗತಾರ್ಹ ಎಂದಿದ್ದಾರೆ.   

ಆದರೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರಿಗೆ ಪುನಃ ಉಪಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ಸಿಕ್ಕಿರುವುದು ದುರದೃಷ್ಟಕರ ಇಂತಹ ತಪ್ಪಿತಸ್ಥರನ್ನು ಶಿಕ್ಷಿಸಲಾಗದ ದೌರ್ಬಲ್ಯ ಈ ಕಾಯ್ದೆ ಹೊಂದಿರುವುದನ್ನು ಇದು ಬಯಲಿಗೆಳೆದಿದೆ. 

ಆದ್ದರಿಂದ ತಕ್ಷಣವೇ ಕೇಂದ್ರ ಸರ್ಕಾರ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡುವಂತೆ ಯು. ಬಸವರಾಜು ಒತ್ತಾಯಿಸಿದ್ದಾರೆ.  

ಬಿಜೆಪಿ ತನ್ನ ಅಧಿಕಾರದಾಹದ ಕಾರಣದಿಂದ ತೊಡಗಿದ ವಿರೋಧ ಪಕ್ಷ ಮುಕ್ತ ಭಾರತ ರಚನೆಯ ಅನೈತಿಕ ಸರ್ವಾಧಿಕಾರದ ರಾಜಕಾರಣದಿಂದ ಮತ್ತು ಆಡಳಿತ ಪಕ್ಷದ ಸದಸ್ಯರು  ಕೈ ಜೋಡಿಸಿದ ಪ್ರಜಾಸತ್ತೆಯ ವಿರೋಧಿ ಸಂಚಿನಿಂದಾಗಿ, ಈ ಉಪ ಚುನಾವಣೆಗಳು ಜನತೆಯ ಮೇಲೆ ಹೇರಲ್ಪಟ್ಟಿದೆ ಎಂದಿದ್ದಾರೆ.  

ರಾಜ್ಯ ವ್ಯಾಪಕ ಬರಗಾಲ, ಅತಿವೃಷ್ಠಿ, ಪ್ರವಾಹಗಳಿಂದ ಮತ್ತು ಬೆಳೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಜನತೆ ನರಳುತ್ತಿರುವಾಗ, ಜನತೆಗೆ ಪರಿಣಾಮಕಾರಿಯಾಗಿ ನೆರವಾಗುವ ಬದಲು ಇಂತಹ ಅನೈತಿಕ ರಾಜಕಾರಣದಲ್ಲಿ ತೊಡಗಿರುವುದು ಸರಿಯಲ್ಲ. ಜನತೆಯನ್ನು ಸಂಕಷ್ಟದಲ್ಲಿಟ್ಜ ಜನವಿರೋಧಿ ಬಿಜೆಪಿ ಹಾಗೂ ಸುಪ್ರಿಂಕೋರ್ಟ್ ಅನರ್ಹರೆಂದು ಗುರುತಿಸಿದವರನ್ನು ಸೋಲಿಸುವಂತೆ ಸಿಪಿಐಎಂ ರಾಜ್ಯ ಸಮಿತಿ ರಾಜ್ಯದ ಮತದಾರರಿಗೆ ಅವರು ಕರೆ ನೀಡಿದ್ದಾರೆ. 

ಮತದಾರರ ತೀರ್ಪನ್ನು ಲಘುವಾಗಿ ಪರಿಗಣಿಸುವ ಈ ಜನವಿರೋಧಿ ಶಕ್ತಿಗಳನ್ನು ಸೋಲಿಸಲು ರಾಜ್ಯದಾದ್ಯಂತ ಸಿಪಿಐಎಂ ಘಟಕಗಳು ಕಾರ್ಯ ನಿರ್ವಹಿಸಿಲಿವೆ ಎಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜು ಎಚ್ಚರಿಕೆ ನೀಡಿದ್ದಾರೆ.