ಸರ್ಕಾರಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿದೆ: ಪಾಟೀಲ

It is the responsibility of the institution to safeguard government property: Patil

ವಿಜಯಪುರ 22. ರಾಜ್ಯ ಸರ್ಕಾರ ಆಯುರ್ವೇದ ಮಹಾವಿದ್ಯಾಲಯಕ್ಕೆ ಲೀಸ್ ಆಧಾರದ ಮೇಲೆ 17ಎಕರೆ 20ಗುಂಟೆ ಜಮೀನನ್ನು ಮಂಜೂರು ಮಾಡಿದ್ದು, ಈ ಜಮೀನಿನಲ್ಲಿ ಅಂದಾಜು 1ಎಕರೆ, 10ಗುಂಟೆ ಜಾಗೆಯನ್ನು ಈಗಾಗಲೇ ಕಾನೂನು ಬಾಹಿರವಾಗಿ ಅತೀಕ್ರಮಣ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಬಾಕಿ ಉಳಿದಿರುವ 16ಎಕರೆ, 10ಗುಂಟೆ ಸರ್ಕಾರಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಬಿ.ಎಲ್‌.ಡಿ.ಇ ಸಂಸ್ಥೆ ಪ್ರಧಾನಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.  

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಇತ್ತೀಚೇಗೆ ಕೆಲವು ವ್ಯಕ್ತಿಗಳು “ಈ ಕೋಟೆಗೋಡೆಯಲ್ಲಿ ಚಾಲುಕ್ಯರ ಕಾಲದ ಸ್ವಯಂಭು ದೇವಸ್ಥಾನ ಇದೆ. ಬಿ.ಎಲ್‌.ಡಿ.ಇ ಸಂಸ್ಥೆಯವರು ಹಿಂದು ದೇವಸ್ಥಾನದ ಮೇಲೆ ದಾಳಿ ಮಾಡಿ, ದೇವಸ್ಥಾನದ ಜಾಗವನ್ನು ಅತೀಕ್ರಮಿಸಿ, ಅಕ್ರಮ ಕಟ್ಟಡ ಕಟ್ಟಿ, ಷಡ್ಯಂತ್ರ ಮಾಡಿದ್ದಾರೆ” ಎನ್ನುವ ರೀತಿಯಲ್ಲಿ ಕೆಲವು ಪೋಸ್ಟ್‌ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೇದ ಹಲವಾರು ದಿನಗಳಿಂದ ಹರಿಬಿಡುತ್ತಿದ್ದಾರೆ ಎಂದು ತಿಳಿಸಿದರು.   

ಆದರೆ, ವಾಸ್ತವವಾಗಿ ವಿಜಯಪುರದ ಆದಿಲ್ ಶಾಹಿ ಅರಸರ ಕೋಟೆಗೋಡೆಗೆ ಹೊಂದಿಕೊಂಡು ಸಿ.ಟಿ.ಎಸ್ ನಂ:605ಎ/1ಎ ಕ್ಷೇತ್ರ 2ಎಕರೆ, 20ಗುಂಟೆ ಮತ್ತು ಸಿ.ಟಿ.ಎಸ್ ನಂ:605ಎ/1ಎ/1ಎ/2 ಕ್ಷೇತ್ರ 15ಎಕರೆ ಹೀಗೆ ಒಟ್ಟು ಆಸ್ತಿ 17ಎಕರೆ, 20 ಗುಂಟೆ ಪ್ರದೇಶ ಸರ್ಕಾರಿ ಜಾಗವನ್ನು 30 ವರ್ಷಗಳ ಅವಧಿಗೆ ಆಯುರ್ವೇದ ಮಹಾವಿದ್ಯಾಲಯ ಸಮಿತಿಗೆ ಸರ್ಕಾರದಿಂದ ಲೀಸ್ ನೀಡಲಾಗಿದೆ. 2011ನೇ ವರ್ಷದಲ್ಲಿ ಆಯುರ್ವೇದ ಮಹಾವಿದ್ಯಾಲಯ ಸಮಿತಿ ಬಿ.ಎಲ್‌.ಡಿ.ಇ ಸಂಸ್ಥೆಯಲ್ಲಿ ವೀಲೀನಗೊಂಡಿದೆ. ಸಂಸ್ಥೆ ವೀಲೀನದ ನಂತರ ಸರ್ಕಾರದಿಂದ ಮತ್ತೆ ಬಿ.ಎಲ್‌.ಡಿ.ಇ ಸಂಸ್ಥೆಗೆ 30ವರ್ಷಗಳ ಕಾಲ ಲೀಸ್ ಮುಂದುವರೆಸಲಾಗಿದೆ. ಸರ್ಕಾರ ಬಿ.ಎಲ್‌.ಡಿ.ಇ ಸಂಸ್ಥೆಗೆ ನೀಡಿದ ಆಸ್ತಿಯನ್ನು ಕಾಪಾಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿ. ಸರ್ಕಾರ ಆಯುರ್ವೇದ ಮಹಾವಿದ್ಯಾಲಯಕ್ಕೆ ಲೀಸ್ ಮೇಲೆ ಮಂಜೂರು ಮಾಡಿದ ಜಾಗೆಯಲ್ಲಿ ಮುರಾಣಕೇರಿಯ ನಿವಾಸಿಗಳಿಂದ ಹಾಗೂ ಇತರೆ ಎರಡು ಕಡೆ 1ಎಕರೆ 10ಗುಂಟೆ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಂಡಿರುತ್ತಾರೆ ಎಂದು ತಿಳಿಸಿದರು.  

ಐತಿಹಾಸಿಕ ಕೋಟೆಗೋಡೆ ಭಾರತ ಸರ್ಕಾರ ವ್ಯಾಪ್ತಿಯ ಪುರಾತತ್ವ ಇಲಾಖೆ (ಎ.ಎಸ್‌.ಐ) ವ್ಯಾಪ್ತಿಗೆ ಬರುತ್ತದೆ.  ಅವರ ನಿಯಮಗಳು ಕಠಿಣವಾಗಿವೆ. ಐತಿಹಾಸಿಕ ದಾಖಲೆಗಳು, ಶಾಸನಗಳು ಆಧರಿಸಿ ಈ ದೇವಸ್ಥಾನದ ಖಚಿತತೆ ಕುರಿತು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಕ್ರಮ ಜರುಗಿಸುವಂತೆ ಸಂಸ್ಥೆ ವತಿಯಿಂದಲೇ ಕೋರಿದ್ದೇವೆ. ಅದು ಸತ್ಯಾಂಶಗಳಿಂದ ಕೂಡಿದ್ದರೆ ಪ್ರಾಚ್ಯವಸ್ತು ಇಲಾಖೆ ಅದನ್ನು ರಕ್ಷಿಸಲಿದೆ. ಇದರಲ್ಲಿ ಸಾರ್ವಜನಿಕರ ಪಾತ್ರ ಇರುವುದಿಲ್ಲ. ಮತ್ತು ಸಂಸ್ಥೆ ವತಿಯಿಂದ ಎಲ್ಲ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.   

ಬಿ.ಎಲ್‌.ಡಿ.ಇ ಸಂಸ್ಥೆ ಎಲ್ಲ ಜಾತಿ-ಜನಾಂಗದ ಸದಸ್ಯರಿರುವ ಈ ಭಾಗದ ಅತೀ ದೊಡ್ಡ ಲಿಂಗಾಯತ ಶಿಕ್ಷಣ ಸಂಸ್ಥೆಯಾಗಿದ್ದು, ಕಾಲ-ಕಾಲಕ್ಕೆ ನಮ್ಮ ಸಂಸ್ಥೆ ಆಸ್ತಿಗಳನ್ನು ಹಲವಾರು ದೇವಾಲಯಗಳಿಗೆ ಈ ಹಿಂದೆ ಬಿಟ್ಟುಕೊಟ್ಟಿರುವ ಉದಾಹರಣೆಗಳು ಇವೆ. ಹೀಗಾಗಿ, ಬೇರೆಯವರ ಆಸ್ತಿಯನ್ನು ಪಡೆದುಕೊಳ್ಳುವುದು, ಅದರ ಮೇಲೆ ಹಕ್ಕು ಚಲಾಯಿಸುವುದು ನಮ್ಮ ಸಂಸ್ಥೆಯ ಇತಿಹಾಸದಲ್ಲಿಯೇ ಇಲ್ಲ ಎಂದು ಸುನೀಲಗೌಡ ಪಾಟೀಲ ಸ್ಪಷ್ಟೀಕರಣ ನೀಡಿದ್ದಾರೆ.   

ಕಳೆದ ಒಂದು ತಿಂಗಳಿನಿಂದ ಪದೇ-ಪದೇ ಸಾಮಾಜಿಕ ಜಾಲತಾಣಗಳಲ್ಲಿ ಬಿ.ಎಲ್‌.ಡಿ.ಇ ಸಂಸ್ಥೆ, ಆಡಳಿತ ಮಂಡಳಿಯ ಕುರಿತು ಹಗುರವಾಗಿ ಸುಳ್ಳು ಸುದ್ದಿಗಳನ್ನು ತೇಲಿ ಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೇವೆ ಮತ್ತು ಸಂಸ್ಥೆಗೆ ಸೇರಿದ ಸರ್ಕಾರಿ ಜಾಗೆಯನ್ನು ಅತೀಕ್ರಮಣ ಮಾಡಿಕೊಂಡಿರುವವರನ್ನು ಅಲ್ಲಿಂದ ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ನಾನು ಪತ್ರ ಬರೆಯುತ್ತೇನೆ ಎಂದು ಬಿ.ಎಲ್‌.ಡಿ.ಇ ಸಂಸ್ಥೆ ಪ್ರಧಾನಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.