ವೈಯಕ್ತಿಕ ಕಾರಣಗಳಿಗೆ ದೇವರನ್ನು ಎಳೆದು ತರುವುದು ಸರಿಯಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

ಬೆಂಗಳೂರು,ಅ 17:    ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಣೆ ಪ್ರಮಾಣದ ಬಗ್ಗೆ ನಡೆಯುತ್ತಿರುವ ಕೆಸರೆರಚಾಟದ ಬಗ್ಗೆ ಕಿಡಿ ಕಾರಿರುವ ಸಚಿವ ಕೆ.ಎಸ್. ಈಶ್ವರಪ್ಪ, ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ದೇವರನ್ನು ಎಳೆದು ತರುವುದು ಸರಿಯಲ್ಲ ಎಂದು ಹೇಳಿದ್ದಾರೆ.  

ವಿಧಾನಸೌಧದಲ್ಲಿ ಸುದ್ದಿಗಾರರರ ಜತೆ ಮಾತನಾಡಿದ ಅವರು, ಜೆಡಿಎಸ್ ನ ಅನರ್ಹ ಶಾಸಕ ಎಚ್. ವಿಶ್ವನಾಥ್ - ಸಾ ರಾ ಮಹೇಶ್ ನಡುವೆ ಆಣೆ ಪ್ರಮಾಣದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕಾರಣಿಗಳು ಆಣೆ ಪ್ರಮಾಣ ಮಾಡುವುದು ಒಳ್ಳೆಯದಲ್ಲ. ರಾಜಕಾರಣಿಗಳನ್ನು ಸಮಾಜ ಸದಾ ನೋಡುತ್ತಿರುತ್ತಾರೆ. ವಿಶ್ವನಾಥ್ ಮತ್ತು ಸಾ.ರಾ.ಮಹೇಶ್ ಅವರದ್ದು ವೈಯಕ್ತಿಕ ವಿಚಾರ ಏನೇ ಇರಬಹುದು. ಇಬ್ಬರೂ ವೈಯಕ್ತಿಕವಾಗಿ ಏನಾದರೂ ಮಾತನಾಡಿಕೊಳ್ಳಲಿ. ಆದರೆ, ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ದೇವರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದರು. 

ಚಾಮುಂಡೇಶ್ವರಿ ಎದುರು ಆಣೆ ಪ್ರಮಾಣ ಮಾಡುವ ಪದ್ಧತಿ ಖಂಡಿತಾ ಒಳ್ಳೆಯದಲ್ಲ. ಯಾವುದೇ ಟೀಕೆ ಟಿಪ್ಪಣಿ ಬಂದರೂ ಯಾವ ರೂಪದಲ್ಲಿ ಉತ್ತರಿಸಬೇಕೋ ಹಾಗೆಯೇ ಉತ್ತರ ಕೊಡಬೇಕು. ನಿಮ್ಮ ಟೀಕೆಗಳು ಸರೀ ತಪ್ಪು ಅಂತ ಸಮಾಜ ತೀರ್ಮಾನ ಕೊಡುತ್ತದೆ. ದೇಶ, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದೇವರ ಮುಂದೆ ಹೋಗಿ. ಆದರೆ, ವೈಯ್ಯಕ್ತಿಕ ಕಾರಣಕ್ಕೆ ದೇವರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದರು. 

ಪ್ರಚಾರಕ್ಕೂ ಹೋಗ್ತೀವಿ, ಪರಿಹಾರನೂ ಮಾಡ್ತೀವಿ: 

ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ತೆರಳುವ ಉದ್ದೇಶದಿಂದಲೇ  ವಿಧಾನಮಂಡಲ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ ಎಂಬ ಕಾಂಗ್ರೆಸ್ ಟೀಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನೆರೆ ಪರಿಹಾರ ಕಾರ್ಯಗಳು ಚೆನ್ನಾಗಿ ನಡೆಯುತ್ತಿವೆ. ನೆರೆ ಪೀಡಿತ ಪ್ರದೇಶಗಳಲ್ಲಿ ಕಂದಾಯ ಸಚಿವರು, ಉಸ್ತುವಾರಿ ಸಚಿವರು, ಶಾಸಕರು ಭೇಟಿ ಕೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು. 

ಮಹಾರಾಷ್ಟ್ರ ಪ್ರಚಾರಕ್ಕೂ ಕೆಲವರು ಹೋಗಿದ್ದಾರೆ. ಕಾಂಗ್ರೆಸ್ ನವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಕೆಲಸ ಇಲ್ಲ. ಪ್ರತಿಪಕ್ಷಗಳಿಗೆ ಮಹಾರಾಷ್ಟ್ರದಲ್ಲಿ ಸೋಲುತ್ತೇವೆ ಎಂಬುದು ಗೊತ್ತಾಗಿದೆ. ಹಾಗಾಗಿ ಸೋಲುವ ಜಾಗಕ್ಕೆ ಯಾಕೆ ಹೋಗಬೇಕು ಅಂದುಕೊಂಡಿದ್ದಾರೆ. ನೆರೆ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕೆಲಸ ನಮ್ಮ ಕರ್ತವ್ಯ. ಪರಿಹಾರವನ್ನೂ ಒದಗಿಸುತ್ತೇವೆ. ಪ್ರಚಾರವನ್ನೂ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.