ವ್ಯಕ್ತಿಯ ಭಾವನೆಗಳನ್ನು ಮತ್ತೊಬ್ಬ ವ್ಯಕ್ತಿಗೆ ಅಳವಡಿಸಲು ಸಾಧ್ಯವಿಲ್ಲ

ಲೋಕದರ್ಶನ ವರದಿ

ಶೇಡಬಾಳ 18: ಈ ಕಲಿಯುಗದಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದು ಇಲ್ಲಿಯ ಮಾನವರು ಚಂದ್ರಲೋಕಕ್ಕೆ ಹೋಗಿ ಬಂದರು, ವೈದ್ಯರು ಒಬ್ಬ ವ್ಯಕ್ತಿಯ ಹೃದಯವನ್ನು ಮತ್ತೊಬ್ಬನಿಗೆ ಅಳವಡಿಸುತ್ತಿದ್ದರು ಕೂಡ, ಒಬ್ಬ ವ್ಯಕ್ತಿಯ ಭಾವನೆಗಳನ್ನು ಮತ್ತೊಬ್ಬ ವ್ಯಕ್ತಿಗೆ ಅಳವಡಿಸಲು ಯಾರಿಂದಲು ಸಾಧ್ಯವಿಲ್ಲ. 

ಅದರಂತೆ ಸಾಧು ಸಂತರು, ಮುನಿಗಳು, ಆಡಂಬರದಿಂದ ಕೂಡಿರುವ ಈ ಜಗತ್ತನ್ನು ಲೆಕ್ಕಿಸದೇ, ಅಷ್ಟ ಐಶ್ವರ್ಯಗಳನ್ನು ಶರೀರದ ಮೇಲಿನ ಮೋಹವನ್ನು ತ್ಯಜಿಸಿ, ಮುನಿದೀಕ್ಷೆ ಪಡೆದುಕೊಂಡು ಆತ್ಮಕಲ್ಯಾಣ ಮಾಡಿಕೊಳ್ಳುತ್ತಿದ್ದಾರೆಂದು ದಕ್ಷಿಣ ಭಾರತ ಜೈನ ಸಭೆಯ ಮುಖ್ಯಸ್ಥರಾದ ಡಾ. ಅಜೀತ ಪಾಟೀಲ ಹೇಳಿದರು. ಅವರು ಮಂಗಳವಾರ ದಿ. 18 ರಂದು ಕಾಗವಾಡ-ಮೈಶಾಳ ಗಡಿಯಲ್ಲಿರುವ ಶ್ರೀ 1008 ಭಗವಾನ ಮಹಾವೀರ ವೃತಿ ಆಶ್ರಮ ಜಿನಭೂಷಣ ನಗರದ ಕಮಲ ಸ್ವಸ್ತಿಕ ಮಂದಿರದಲ್ಲಿ ಆಯೋಜಿಸಲಾಗಿದ್ದ, ಬಾಲಯೋಗಿ ವಾಣಿಭೂಷಣ ಆಚಾರ್ಯ ಶ್ರೀ 108 ಶೀತಲಸಾಗರ ಮಹಾರಾಜರ 10 ನೇ ಪದಾರೋಹಣ ಮತ್ತು ಗುರು ಉಪಕಾರ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೂಡ ಸಮಾಜದಲ್ಲಿ ಧಾರ್ಮಿಕ, ಅಧ್ಯಾತ್ಮಿಕ ಭಾವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ. ಸಾಧುಸಂತರ ಮುನಿಗಳು ಹೇಳಿದ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗುವಂತೆ ಕರೆ ನೀಡಿದರು. 

ಆಚಾರ್ಯ ಶ್ರೀ 108 ಶೀತಲಸಾಗರ ಮಹಾರಾಜರ 10 ನೇ ಪದಾರೋಹಣ ಮತ್ತು ಗುರು ಉಪಕಾರ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪೂಜಾಭೀಷೇಕ, ಪೂಜಾ ವಿಧಿ, ವಿಧಾನಗಳು ಜರುಗಿದವು.

ಇದೇ ಸಮಯದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಜರುಗಿತು. ಇತ್ತಿಚಿಗೆ ಸೈಕಲ್ ಮೂಲಕ ಸದಲಗಾದಿಂದ ಬಿಹಾರದ ಸಮ್ಮೇದ ಶಿಖರಜಿಗೆ ಶಾಂತಿ ಸದ್ಬಾವನಾ ಸೈಕಲ್ ಯಾತ್ರೆ ಕೈಗೊಂಡಿದ್ದ ಯುವಕರನ್ನು ಸತ್ಕರಿಸಿ ಸನ್ಮಾನಿಸಲಾಯಿತು. ಅಲ್ಲದೇ ಸಮ್ಮೇದ ಶಿಖರಜಿ ದರ್ಶನಕ್ಕೆ ತೆರಳಲಿರುವ ಬಡ ಕುಟುಂಬಗಳಿಗೆ ಸನ್ಮತಿ ಶೀತಲ ಜನಕಲ್ಯಾಣ ಫೌಂಡೇಶನ ಸಾಂಗಲಿ ವತಿಯಿಂದ 125 ಜನರಿಗೆ ಉಚಿತ ಟಿಕೇಟ್ ಮತ್ತು ಗುರುತಿನ ಚೀಟಿಗಳನ್ನು ವಿತರಿಸಲಾಯಿತು. 

ಈ ಸಮಯದಲ್ಲಿ 1008 ಭಗವಾನ ಮಹಾವೀರ ವೃತಿ ಆಶ್ರಮದ ಅಧ್ಯಕ್ಷರಾದ ಟಿ.ಕೆ.ಧೋತರೆ, ಸನ್ಮತಿ ಶೀತಲ ಜನಕಲ್ಯಾಣ ಫೌಂಡೇಶನ ಅಧ್ಯಕ್ಷ ಸುನೀಲ ಪಾಟೀಲ, ಎನ್.ಜೆ.ಪಾಟೀಲ, ವಿಜಯ ಪಾಟೀಲ ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರಾವಣ-ಶ್ರಾವಕಿಯರು ಆಗಮಿಸಿದ್ದರು.