ಲೇಖಾನುದಾನ ಒಂದೇ ದಿನ ಮಂಡಿಸಿ, ಅದೇ ದಿನ ಅನುಮೋದನೆ ಪಡೆಯುವುದು ಸರಿಯಲ್ಲ: ಕೃಷ್ಣಬೈರೇಗೌಡ ಆಕ್ಷೇಪ

 ಬೆಂಗಳೂರು, ಅ.12:    ಹಣಕಾಸು ವಿಧೇಯಕ, ಹಣಕಾಸು ಬೇಡಿಕೆಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಕನಿಷ್ಠ 15 ದಿನಗಳಿಗಿಂತ ಕಡಿಮೆ ಇರಬಾರದು ಎಂಬ ನಿಯಮವಿದ್ದರೂ ಒಂದೇ ದಿನದಲ್ಲಿ ಸರ್ಕಾರ ಅನುಮೋದನೆ ಪಡೆಯಲು ಮುಂದಾಗಿರುವುದು ಸರಿಯಲ್ಲ. ವಿಧೇಯಕದಲ್ಲಿ ಏನಿದೆ, ಏನಿಲ್ಲ ಎಂಬುದರ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಸದನವನ್ನು ಕೇವಲ ಅಂಚೆಯ ಸ್ಟಾಂಪ್ಗೆ ಸೀಮಿತಗೊಳಿಸಬಾರದು ಎಂದು ಕಾಂಗ್ರೆಸ್ ಸದಸ್ಯ, ಮಾಜಿ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ  ಆಕ್ಷೇಪ ವ್ಯಕ್ತಪಡಿಸಿದರು. ವಿತ್ತೀಯ ಕಾರ್ಯಕಲಾಪಗಳನ್ನು ಮಂಡಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸದನದಲ್ಲಿ ಮುಂದಾದಾಗ ಕೃಷ್ಣಬೈರೇಗೌಡ ಆಕ್ಷೇಪವೆತ್ತಿ, ಹಣಕಾಸು ಬೇಡಿಕೆಗಳ ಮೇಲೆ ಸಮಗ್ರ ಚರ್ಚೆಯಾಗಬೇಕು. ನಿಯಮ ಕೂಡ ಇದನ್ನೇ ಹೇಳುತ್ತದೆ ಎಂದು ಸ್ಪೀಕರ್ ಅವರ ಗಮನ ಸೆಳೆದರು. ಆಗ ಸಚಿವ ಮಾಧುಸ್ವಾಮಿ ಮಾತನಾಡಿ, 15 ದಿನಗಳ ವರೆಗೆ ಚರ್ಚೆ ನಡೆಸಬೇಕು ಎಂಬ ಸದನದ ನಿಯಮವಿದ್ದರೂ ಈ ಹಿಂದೆ ಒಂದೇ ಬಾರಿ ಲೇಖಾನುದಾನ ಮಂಡಿಸಿರುವುದು, ಅನುಮೋದನೆ ಪಡೆದುಕೊಂಡಿರುವುದೂ ಈ ಸದನದಲ್ಲಿ ನಡೆದಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಸದನವನ್ನು ಮೂರು ದಿನಕ್ಕೆ ಇಳಿಸಲಾಗಿದೆ. ನಮಗೂ ಬೇಡಿಕೆ ಮೇಲೆ ಚರ್ಚೆ ಮಾಡುವ ಆಸಕ್ತಿ ಇದೆ. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕಲಾಪವನ್ನು ಮೂರು ದಿನಕ್ಕೆ ಇಳಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಸಂಪ್ರದಾಯದಂತೆ ನಡೆದುಕೊಳ್ಳಬೇಕಾಗುತ್ತದೆ ಎಂದರು. ಮಧ್ಯಪ್ರವೇಶಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೃಷ್ಣಬೈರೇಗೌಡ ಎತ್ತಿರುವ ಆಕ್ಷೇಪ ಸರಿಯಾಗಿದೆ. ಬಜೆಟ್ ಮೇಲಿನ ಸಾಮಾನ್ಯ ಚಚರ್ೆ ಹಾಗೂ ಬೇಡಿಕೆಗಳ ಮೇಲೆ ಚರ್ಚೆ ಬೇರೆ ಬೇರೆಯಾಗಿದೆ. ಬೇಡಿಕೆಗಳನ್ನು ಮತಕ್ಕೆ ಹಾಕಲು ಕನಿಷ್ಠ 15 ದಿನಗಳಿಗೆ ಕಡಿಮೆ ಇಲ್ಲದಂತೆ ...ಎಂದು ನಿಯಮದಲ್ಲಿ ನಮೂದಿಸಲಾಗಿದೆ. ತಪ್ಪಾಗಿರುವುದನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಅದು ಬಿಟ್ಟು ಸಮರ್ಥಿಸುವುದು ಸರಿಯಲ್ಲ, ಹಿಂದೆ ಹಾಗೆ ನಡೆದಿದೆ,.. ಹೀಗೆ ನಡೆದಿದೆ ...ಎಂದು ಹೇಳುವುದು ಸರಿಯಲ್ಲ. ಹಿಂದಿನ ಮೈತ್ರಿ ಸರ್ಕಾರ ಮಂಡಿಸಿದ್ದ ಬಜೆಟ್ ಇದಾಗಿದ್ದು, ಹಾಗಾಗಿ ಇದಕ್ಕೆ ವಿರೋಧಿಸುವುದಿಲ್ಲ. ಮುಂದೆ ಈ ರೀತಿ ಆಗಬಾರದು ಎಂದು ಹೇಳಿದರು. ಪ್ರಜಾಪ್ರಭುತ್ವದ ಮೌಲ್ಯ, ನಿಯಮಾವಳಿಗಳನ್ನು ಗಾಳಿಗೆ ತೂರುವುದು ಸರಿಯಲ್ಲ, ಕೃಷ್ಣಬೈರೇಗೌಡ ಎತ್ತಿರುವ ಆಕ್ಷೇಪ ಸರಿಯಾಗಿದೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ, ಎಚ್ಚರವಹಿಸುತ್ತೇವೆ. ನೀವು ಎತ್ತಿರುವ ಆಕ್ಷೇಪ ಸರಿಯಾಗಿದೆ. ಇನ್ನು ಮುಂದೆ ಆಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಈ ವೇಳೆ ಜೆ.ಸಿ.ಮಾಧುಸ್ವಾಮಿ ಅವರ ಆಕ್ಷೇಪವನ್ನು ಪ್ರಸ್ತಾಪಿಸಿದ ಕೃಷ್ಣಬೈರೇಗೌಡ, ಸಂಪ್ರದಾಯದ ಹೆಸರಿನಲ್ಲಿ ನಿಯಮಗಳನ್ನು ಬದಲಾಯಿಸುವುದು ಸರಿಯಲ್ಲ. ಸಭಾ ನಾಯಕರು, ಸ್ಪೀಕರ್ ಅವರ ಬಗ್ಗೆ ನಮಗೆ ಗೌರವವಿದೆ ಎಂದು ಹೇಳಿದರು. ಸಚಿವರಾದ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ ಅವರು ಮಧ್ಯಪ್ರವೇಶಿಸಿ, ಕೃಷ್ಣ ಬೈರೇಗೌಡ ಅವರು ಸಚಿವರಾಗಿದ್ದಾಗ ಹೇಗೆ ನಡೆದುಕೊಂಡಿದ್ದಾರೆ. ಆಗ ಎಷ್ಟು ದಿನ ಚರ್ಚೆ ನಡೆದಿದೆ ಎಂಬುದು ಗೊತ್ತಿದೆ ಎಂದು ಹೇಳಿದಾಗ ಉಭಯ ಕಡೆಗಳಿಂದಲೂ ಮಾತಿನ ಚಕಮಕಿ ನಡೆಯಿತು. ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶಿಸಿ, ಇನ್ನು ಮುಂದೆ ಈ ರೀತಿ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿ ವಿವಾದಕ್ಕೆ ತೆರೆ ಎಳೆದರು. ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಹಿಂದಿನ ಸರ್ಕಾರ ಮಂಡಿಸಿದ್ದ ಬಜೆಟ್ನ ಲೇಖಾನುದಾನ ಮಂಡಿಸಿದರು.