ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಪಾಠ ಬೋಧನೆ ಅಗತ್ಯ: ಹುಡೇದಮನಿ
It is necessary to teach children good moral lessons: Hudedamani
ಧಾರವಾಡ 20: ಬಾಲಕ, ಪಾಲಕ, ಬೋಧಕ ಎಂಬಂತೆ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಪಾಠ ಬೋಧನೆ ಮಾಡುವುದು ಈಗಿನ ಕಾಲಘಟ್ಟದಲ್ಲಿ ಪ್ರಮುಖವಾಗಿದೆ. ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆ ಮಕ್ಕಳಲ್ಲಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಾಯಿ ಮೊದಲ ಗುರುವಾಗಿ ಮಕ್ಕಳಿಗೆ ಸಂಸ್ಕಾರವನ್ನು ನೀಡುವುದು ಅವಶ್ಯಕವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಆರ್.ಎಂ.ಎಸ್.ಎ. ಅಧಿಕಾರಿ ಎಸ್. ಎಂ ಹುಡೇದಮನಿ ಹೇಳಿದರು. ಅವರು ಧಾರವಾಡದ ಶಾಂತಿ ಸದನ ಪ್ರೌಢಶಾಲೆಯಲ್ಲಿ ನಡೆದ, ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಗುವಿನ ಬೋಧನೆಯ ಜೊತೆಗೆ ಪಾಲಕರು ಕುಳಿತುಕೊಳ್ಳಬೇಕು. ಬೆಳೆಯುವ ಸಿರಿಗಳು ಸರಿಯಾದ ಮಾರ್ಗದರ್ಶನದಲ್ಲಿ ಬೆಳೆಯುವುದು ಹಾಗೂ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರವನ್ನು ನೀಡುವುದು ಅತಿ ಅವಶ್ಯಕವಾಗಿದೆ. ಮಕ್ಕಳಿಗೆ ಜಂಕ್ ಫುಡ್ ನಿಂದ ದೂರವಿಡಲು ತಿಳಿಸಿದರು. ಮಕ್ಕಳ ಓದು ಬರಹದ ಕಡೆಗೆ ಶಿಕ್ಷಕರ ಜೊತೆಗೆ ಪಾಲಕರು ಕೂಡ ಗಮನಹರಿಸಬೇಕು. ನೈತಿಕ ಶಿಕ್ಷಣ ಮನೆಯಿಂದಲೇ ಪ್ರಾರಂಭವಾಗಬೇಕು ಹಾಗೂ ಮಕ್ಕಳಲ್ಲಿ ಬೇರೆ ಬೇರೆ ಸಾಮರ್ಥ್ಯ ಇರುತ್ತದೆ. ಮಕ್ಕಳ ಸೂಕ್ತ ಶಕ್ತಿಯನ್ನು ಹೊರತೆಗೆಯುವುದು ಹಾಗೂ ಅವರ ಆಶೋತ್ತರಗಳಿಗೆ ಗಮನಕೊಟ್ಟು ಮಗುವಿನ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು. ಮಕ್ಕಳನ್ನು ಸುಂದರವಾದ ಸಂಸ್ಕಾರಯುತವಾಗಿ ಬೆಳೆಸಿ ಉತ್ತಮ ದಾರಿಗೆ ಕೊಂಡೊಯ್ಯುವುದು ಪಾಲಕ ಮತ್ತು ಬೋಧಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಧಾರವಾಡ ಶಹರದ ಎಸ್‌ಎಸ್‌ಎಲ್‌ಸಿ ನೂಡಲ್ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕ ಬಸವರಾಜ್ ಚಿಕ್ಕೂರ್ ಅವರು ಮಾತನಾಡಿ, ಇವತ್ತಿನ ಮಕ್ಕಳಿಗೆ ಓಪಚಾರಿಕ ಶಿಕ್ಷಣ ಜೊತೆಗೆ ಸಂಸ್ಕಾರ ಶಿಕ್ಷಣದ ಅವಶ್ಯಕತೆ ಇದೆ ಮತ್ತು ಆಚಾರಕ್ಕೆ ಅರಸನಾಗಿ ನೀತಿಗೆ ಪ್ರಭುವಾಗಿ ಮಾತಿನಲ್ಲಿ ಚೂಡಾಮಣಿಯಾಗಿ ಜಗಕೆಲ್ಲ ಜೊತೆಯಾಗು ಎನ್ನುವ ಜನಪದ ಗೀತೆಯ ಮೂಲಕ ಹಿಂದಿನ ಕಾಲದಲ್ಲಿ ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುತ್ತಿದ್ದರು. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡುವುದು ಮುಖ್ಯವಾಗಿದೆ ಎಂದರು. ಧಾರವಾಡ ಶಹರದ ರಾಜ್ಯಪಠ್ಯಕ್ರಮದ 74 ಪ್ರೌಢಶಾಲೆಗಳಲ್ಲಿ ಅತ್ಯುತ್ತಮ 5 ಶಾಲೆಗಳಲ್ಲಿ ಶಾಂತಿಸದನ ಪ್ರೌಢಶಾಲೆಯು ಒಂದಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸಿಸ್ಟರ್ ರೋಜಿ ಕುಟಿನೊ ಅವರು ಮಾತನಾಡಿ ಸಣ್ಣ ಬೆಳಕನ್ನು ಕೂಡ ನಾವು ಹಗುರವಾಗಿ ಪರಿಗಣಿಸಬಾರದು ಕಗ್ಗತ್ತಲಲ್ಲಿ ಸಣ್ಣ ಬೆಳಕು ಕೂಡ ಪ್ರಖರವಾಗಿ ಪ್ರಕಾಶಿಸುತ್ತದೆ ಹಾಗೆಯೇ ಮಕ್ಕಳಲ್ಲಿಯ ಸಣ್ಣ ಸಣ್ಣ ಒಳ್ಳೆಯ ಹವ್ಯಾಸಗಳು ಅವರನ್ನು ಮುಂದೆ ಮುಖ್ಯವಾಹಿನಿಗೆ ಬರಲು ಪ್ರೇರೇಪಿಸುತ್ತವೆ. ಮಕ್ಕಳು ಘನತೆ, ನಂಬಿಕೆ ಹಾಗೂ ಆತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಬಹುದು. ನಮ್ಮ ಮಕ್ಕಳು ನಮ್ಮ ಶಾಲೆಯ ಹೆಮ್ಮೆ, ಮಕ್ಕಳು ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ನಮ್ಮ ಶಾಲೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ ಇದಕ್ಕೆ ಬೆನ್ನೆಲುಬಾಗಿ ನಿಂತ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಪಾಲಕರು ಮುಖ್ಯ ಕಾರಣ ಎಂದರು. ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಫಿಲೋಮೆನಾ ಮೆನೆಜಸ್ ಅವರು ಶಾಲಾ ವರದಿಯನ್ನು ಮಂಡಿಸಿದರು.
ಶಾಂತಿಸದನ ಪ್ರೌಢಶಾಲೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ರೀಟಾ ಸ್ಟಿಪನ್ ಬೊರ್ಜಿಸ್ ಮತ್ತು 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 97.76 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ಅಮಿತ್ ತಿವಾರಿ ಹಾಗೂ ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿ ವಿಜೇತರಾದ ಸಮರ್ಥ ಹುಬ್ಬಳ್ಳಿ, ಅಜೀಮ್ ಮಖಾನಂದಾರ್ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರೀತಮ್ ಗುರಲಕಟ್ಟಿ ಇವರನ್ನು ಸನ್ಮಾನಿಸಲಾಯಿತು. ಶಾಲೆಯ ವ್ಯವಸ್ಥಾಪಕ ಸಿಸ್ಟರ್ ಫಾತಿಮಾ ಪರ್ನಾಂಡಿಸ್, ಮುಖ್ಯೋಪಾದ್ಯಾಯನಿ ಸಿಸ್ಟರ್ ಫಿಲೋಮೆನಾ ಮೆನೆಜಸ್, ಫಾದರ್ ಜೊಸೆಫ್ ರೊಡ್ರಿಗಸ್, ಫಾದರ ಪ್ರತಾಪ, ಪ್ರೀತಮ ತಿವಾರಿ ಹಾಗೂ ಶಿಕ್ಷಕಿ ರೀಟಾ ಸ್ಟಿಪನ್ ಬೊರ್ಜಿಸ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 