ಬೆಂಗಳೂರು, ಮೇ 6,ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಿಲಿಂಡರ್ ದರ ಪಾವತಿಸಲು ಸಾಧ್ಯವಾಗದ ಅರ್ಹ ಕುಟುಂಬಗಳಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಸ್ಪಷ್ಟಪಡಿಸಿದೆ. ಈ ಕುರಿತ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲರು ಈ ಸ್ಪಷ್ಟೀಕರಣ ನೀಡಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಸಂಕಷ್ಟವಿದ್ದು, ಪ್ರಧಾನ ಮಂತ್ರಿ ಉಜ್ವಲಾ ಹಾಗೂ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಸೇರಿದಂತೆ ನಿರ್ದಿಷ್ಟ ಯೋಜನೆಗಳ ವ್ಯಾಪ್ತಿಗೆ ಒಳಪಡದವರಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಸಿಲಿಂಡರ್ ಪೂರೈಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಈ ಸಂಬಂಧ ಈ ಹಿಂದೆಯೇ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಕೀಲರು ಮಾಹಿತಿ ನೀಡಿದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿತು