ಹಾಲು ಕುಡಿದ ಮಕ್ಕಳೇ ಉಳಿಯುವುದು ಕಷ್ಟ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರೆಯೇ....?- ಸಿದ್ದರಾಮಯ್ಯ

ಹುಬ್ಬಳ್ಳಿ, ಆ 26     ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಬಹಳ ದಿನ ಉಳಿಯುವುದಿಲ್ಲ, ನನ್ನ ಲೆಕ್ಕಾಚಾರದಲ್ಲಿ ಒಂದು ವರ್ಷ ಉಳಿದರೆ ಹೆಚ್ಚು,  ಬಂಡಾಯಗಾರರನ್ನು ಸೇರಿಸಿಕೊಂಡು ಸರ್ಕಾರ ರಚಿಸಿದರೆ ಮತ್ತೇನಾಗುತ್ತದೆ ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವಾಗ ಬೇಕಾದರೂ ವಿಧಾನಸಭಾ ಚುನಾವಣೆ ಬರಬಹುದು. ಆದ್ದರಿಂದ ಪಕ್ಷ ಬಲಪಡಿಸಿ ಎಂದು ಕಾರ್ಯಕರ್ತರಿಗೆ ಸೂಚಿಸಿದ್ದೇನೆ, ಈ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬ ಖಾತರಿಯಿಲ್ಲ. ಹಾಲು ಕುಡಿದ ಮಕ್ಕಳೇ ಬದುಕುವುದು ಕಷ್ಟ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರೆಯೇ ?. 108 ಜನ ಶಾಸಕರನ್ನು ಇಟ್ಟುಕೊಂಡು ಎಷ್ಟು ದಿನ ಸರ್ಕಾರ ನಡೆಸುತ್ತಾರೆ ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. 

ಜೆಡಿಎಸ್ ಮುಖಂಡರಾದ ಎಚ್.ಡಿ.ದೇವೇಗೌಡ ಅವರ ಆರೋಪಗಳಿಗೆ ಈಗಾಗಲೇ ಸುದೀರ್ಘವಾಗಿ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ್ದೇನೆ, ತಮ್ಮ ಮೇಲೆ ಗೂಬೆ ಕೂರಿಸಿ ರಾಜಕೀಯ ಲಾಭ ಗಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನ ರಾಜಕೀಯವಾಗಿ ಪ್ರಬುದ್ಧರು. ಅವರ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಜೆಡಿಎಸ್ ಮುಖಂಡರ ಹುನ್ನಾರ, ಸಂಚುಗಳನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. 

ಕಾಂಗ್ರೆಸ್ ಶಾಸಕರನ್ನು ನಾನು ಮುಂಬೈಗೆ ಕಳುಹಿಸಿದ್ದೇನೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ, ಹಾಗಾದರೆ ಜೆಡಿಎಸ್ ಶಾಸಕರಾಗಿದ್ದ ಗೋಪಾಲಯ್ಯ, ಎಚ್.ವಿಶ್ವನಾಥ್, ನಾರಾಯಣಗೌಡ ಅವರನ್ನು ಕಳುಹಿಸಿದವರು ಯಾರು ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಪತನಗೊಂಡಿದೆ ಎಂದು ಪುನರುಚ್ಚರಿಸಿದರು. 

ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಕೇಂದ್ರದಿಂದ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದೆ. ಈ ತಂಡ ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಿ ಹಾನಿ, ನಷ್ಟದ ಬಗ್ಗೆ ವರದಿ ತಯಾರಿಸಬೇಕು. ಆದಷ್ಟು ಬೇಗ ಕೇಂದ್ರಕ್ಕೆ ವರದಿ ಸಲ್ಲಿಸಿ ಪರಿಹಾರ ನೀಡುವಂತೆ ಮಾಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಒತ್ತಾಯಿಸಿದರು. 

ಒಂದು ಅಂದಾಜಿನ ಪ್ರಕಾರ 18ರಿಂದ 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಸಾವಿರಾರು ಮನೆಗಳು ಕುಸಿದಿವೆ. ಇವರೆಲ್ಲರಿಗೂ ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ ಅವರು, ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಅವರ ನೇತೃತ್ವದ ಕೆಪಿಸಿಸಿ ತಂಡ ಕೂಡ ಸಮೀಕ್ಷೆ ನಡೆಸಿ ವರದಿ ತಯಾರಿಸಿದೆ ಎಂದರು. 

ಪ್ರವಾಹ ಉಂಟಾಗಿ 20 ದಿನ ಕಳೆದರೂ ಕೇಂದ್ರದಿಂದ ಒಂದು ರೂಪಾಯಿ ಕೂಡ ಪರಿಹಾರ ಬಿಡುಗಡೆಯಾಗಿಲ್ಲ. ಕೇಂದ್ರ ಅಧ್ಯಯನ ತಂಡ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ ಬಳಿಕ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ, ಇಷ್ಟು ವಿಳಂಬ ಮಾಡುವುದು ಸರಿಯಲ್ಲ. ತಕ್ಷಣ ತಾತ್ಕಾಲಿಕ ಪರಿಹಾರವಾಗಿ 5,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು, ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. 

ಪ್ರವಾಹದಿಂದ ಒಂದು ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಆದರೆ ಮುಖ್ಯಮಂತ್ರಿಯವರು 40 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ನಿನ್ನೆ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಇಷ್ಟೊಂದು ಪ್ರಮಾಣದ ಹಾನಿ ಉಂಟಾಗಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಸೃಷ್ಟಿಸುತ್ತಿರುವುದರ ಬಗ್ಗೆ ಕೇಳಿದಾಗ, ಈ ಬಗ್ಗೆ ತಮಗೆ ಮಾಹಿತಿ ಇಲ್ಲ, ಸಚಿವರು, ಮುಖ್ಯಮಂತ್ರಿಗಳು ಇಷ್ಟು ಹೊತ್ತಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನರ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಿತ್ತು. ಆದರೆ ಅವರು ದೆಹಲಿ-ಬೆಂಗಳೂರಿಗೆ ಓಡಾಡುತ್ತಿದ್ದಾರೆ, ಎಷ್ಟು ಜನ ಡಿಸಿಎಂ ಹುದ್ದೆ ಸೃಷ್ಟಿಸುತ್ತಾರೆ ಎಂಬುದು ತಮಗೆ ಸಂಬಂಧಿಸಿದ ವಿಷಯವಲ್ಲ ಎಂದರು. 

ಸರ್ಕಾರ ರಚಿಸಲು ರಾಜ್ಯದ ಜನ ಬಿಜೆಪಿಗೆ ಜನಾದೇಶ ನೀಡಿರಲಿಲ್ಲ. ಬಿಜೆಪಿ ವಾಮವಾರ್ಗದ ಮೂಲಕ ಕುದುರೆ ವ್ಯಾಪಾರ ನಡೆಸಿ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. 

ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ, ಎಐಸಿಸಿ ವರಿಷ್ಠರು ರಾಜ್ಯಕ್ಕೆ ಬರುತ್ತಾರೆ ಎಂಬ ಮಾಹಿತಿ ಇದೆ, ಆದರೆ ನಾನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.