ಇದು ಯಾರದ್ದೋ ಇ ಮೇಲ್ ಐಡಿಯಲ್ಲ. ಸ್ಯಾಂಡಲ್ ವುಡ್ ನ ನೂತನ ಚಿತ್ರವೊಂದರ ಹೆಸರು.

ಬೆಂಗಳೂರು, ಜೂನ್ 19, ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಹೆಮ್ಮೆಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ  ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಎಂ.ಎಲ್. ಸಿ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಿಸುತ್ತಿರುವ srikrishna@gmail.com ಚಿತ್ರದ ಮುಹೂರ್ತ ಸಮಾರಂಭ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಸರಳವಾಗಿ ನೆರವೇರಿತು.. ನಾಗಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಡಾರ್ಲಿಂಗ್ ‌ಕೃಷ್ಣ ಅಭಿನಯಿಸುತ್ತಿದ್ದಾರೆ.ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಭಾವಚಿತ್ರದ ಮೇಲೆ ಚಿತ್ರದ ಪ್ರಥಮ ಸನ್ನಿವೇಶವನ್ನು ಸೆರೆಹಿಡಿಯಲಾಯಿತು..ಮೊದಲ ದೃಶ್ಯಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಪುತ್ರಿ ಬೃಂದಾ ಜಯರಾಂ ಆರಂಭ ಫಲಕ ತೋರಿದರೆ, ಪುತ್ರ ಸಂದೇಶ್ .ಎನ್  ಕ್ಯಾಮೆರಾ ಚಾಲನೆ ಮಾಡಿದರು.  ಸಂದೇಶ್ ನಾಗರಾಜ್, ನಿರ್ದೇಶಕ ನಾಗಶೇಖರ್, ನಾಯಕ ಡಾರ್ಲಿಂಗ್ ಕೃಷ್ಣ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗೀತರಚನೆಕಾರ ಕವಿರಾಜ್, ಛಾಯಾಗ್ರಾಹಕ ಸತ್ಯ ಹೆಗಡೆ, ನಟಿ ಮಿಲನ‌ ನಾಗರಾಜ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಹಿಂದೆ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ ಅಮರ್ ಚಿತ್ರವನ್ನು ಸಂದೇಶ್ ಎನ್ ಅವರು ನಿರ್ಮಿಸಿದ್ದು, ನಾಗಶೇಖರ್ ಅವರೆ ನಿರ್ದೇಶಿಸಿದ್ದರು. ಇದು ಅವರಿಬ್ಬರ ಕಾಂಬಿನೇಶನ್ ನ ಎರಡನೇ ಚಿತ್ರ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಸರ್ಕಾರದ ಅನುಮತಿ ದೊರಕಿದ ಕೂಡಲೆ ಆರಂಭವಾಗಲಿದ್ದು,  ಬೆಂಗಳೂರಿನಲ್ಲಿ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.ಸಂಜು ವೆಡ್ಸ್ ಗೀತಾ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ನಾಗಶೇಖರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕವಿರಾಜ್  ಹಾಡುಗಳನ್ನು ಬರೆಯುತ್ತಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನವಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ  ಮಾಹಿತಿ ನೀಡಲಾಗುವುದು‌ ಎಂದು ನಿರ್ದೇಶಕರು ತಿಳಿಸಿದ್ದಾರೆ.