ಪ್ರಧಾನಮಂತ್ರಿ ಭಾಷಣದಲ್ಲಿ ಯಾವುದೇ ಪ್ಯಾಕೇಜ್‌ ಇಲ್ಲ ?: ಸೀತಾರಾಂ ಯೆಚೂರಿ

ನವದೆಹಲಿ, ಮಾ.20, ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಕೊರೋನಾ ಸೋಂಕು ಬಗ್ಗೆ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕೊರೊನಾವೈರಸ್ ಮಹಾಮಾರಿಯನ್ನು ಎದುರಿಸಲು ಜನರಿಗೆ ನೆರವಾಗಲು ಸರಕಾರದ ಸಿದ್ಧತೆಗಳು ಮತ್ತು ಅದು ಕೈಗೊಂಡಿರುವ ಕ್ರಮಗಳ ಬಗ್ಗೆ ಏನೂ ಇರಲಿಲ್ಲ ಎಂಬುದು ದುರದೃಷ್ಟಕರ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ. ಪ್ರಧಾನ ಮಂತ್ರಿಗಳು ಮುಂದಿಟ್ಟ ಸಾಂಕೇತಿಕ ಕ್ರಮಗಳನ್ನು ಬಿಟ್ಟರೆ, ವರ್ಕ್ ಫ್ರಮ್ ಹೋಮ್(ಮನೆಯಿಂದ ಕೆಲಸ) ಅವಕಾಶವಿರದ, ತಮ್ಮ ದಿನದ ಆದಾಯದಿಂದಲೇ ಬದುಕುಳಿಯಬೇಕಾಗಿರುವ ಭಾರತದ ಬಹುಪಾಲು ಜನಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಶಮನ ಮಾಡಲು ಸರಕಾರ ಏನು ಮಾಡುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ. ಎಲ್ಲಾ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಳ್ಳುವುದರಿಂದ ಅತಿ ಹೆಚ್ಚು ಸಂಕಷ್ಟಕ್ಕೀಡಾಗುವವರು ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟವರು ಎಂಬುದು ಸ್ಪಷ್ಟ. ಸರಕಾರ ತನ್ನ ದಾಸ್ತಾನುಗಳಲ್ಲಿರುವ ಹೆಚ್ಚುವರಿ ಆಹಾರಧಾನ್ಯಗಳನ್ನು ಇವರಿಗೆ ಲಭ್ಯಗೊಳಿಸಲು  ಏನು ಮಾಡುತ್ತಿದೆ? ಕೇರಳದ ಎಡ ಸರಕಾರ ವೈದ್ಯಕೀಯ ಬಿಕ್ಕಟ್ಟನ್ನು ಎದುರಿಸುವುದು ಹೇಗೆ ಎಂದು ತೋರಿಸಿಕೊಟ್ಟಿದೆ. ಮಾತ್ರವಲ್ಲ, ಈಗ ಬಡವರ ಸಂಕಷ್ಟಗಳನ್ನು ಶಮನ ಮಾಡಲು ಕೂಡ ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ. ಅದು ಮಾರ್ಚ್ 19ರಂದು 20,000 ಕೋಟಿ ರೂ.ಗಳ ಪುನರುಜ್ಜೀವನ ಪ್ಯಾಕೇಜನ್ನು ಪ್ರಕಟಿಸಿದೆ. ಪಿಂಚಣಿದಾರರು, ಆಟೋ ಮತ್ತು ಬಸ್ ಮಾಲಕರಿಗೂ ಹಲವಾರು ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ. ಪ್ರಧಾನ ಮಂತ್ರಿಗಳು ಈ ಮಾದರಿಯನ್ನು ಅನುಸರಿಸಿ ಇಡೀ ದೇಶಕ್ಕೆ ಇಂತಹ ಕ್ರಮಗಳನ್ನೇಕೆ ಪ್ರಕಟಿಸಲಿಲ್ಲ ಎಂದು ಯೆಚೂರಿ ಪ್ರಶ್ನಿಸಿದ್ದಾರೆ.