ಥೀಮ್ ಪಾರ್ಕ್ ವಿರೋಧಿಸಿದ್ದ ಡಿಕೆ ಶಿವಕುಮಾರ್ ಏಸು ಪ್ರತಿಮೆ ನಿರ್ಮಿಸುತ್ತಿರುವುದು ಸರಿನಾ? : ಸಚಿವ ಸಿ.ಟಿ.ರವಿ ಪ್ರಶ್ನೆ

ಬೆಂಗಳೂರು,ಡಿ 28, ಈ ಹಿಂದೆ ಇಸ್ಕಾನ್ ಸಂಸ್ಥೆ ನಿರ್ಮಿಸಲು ಮುಂದಾಗಿದ್ದ ಕೃಷ್ಣಾ ಥೀಮ್ ಪಾರ್ಕ್ ಗೆ ವಿರೋಧ ವ್ಯಕ್ತಪಡಿಸಿದ್ದ ಡಿ.ಕೆ.ಶಿವ ಕುಮಾರ್ ಇಂದು ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವುದು ಎಷ್ಟು ಸರಿ ಎಂದು ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.  ನಗರದ ಕೊಂಡಚ್ಚಿ ಬಸಪ್ಪ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಂದು ಕೃಷ್ಣ ಪಾರ್ಕ ನಿರ್ಮಾಣಕ್ಕೆ ಡಿಕೆ.ಶಿವಕುಮಾರ್  ಏಕೆ ವಿರೋಧ ಮಾಡಿದ್ದರು?.ಕೃಷ್ಣನಿಗೆ ವಿರೋಧಿಸಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುತ್ತಿರುವುದು ಎಷ್ಟು ಸರಿ..? ಕ್ರಿಸ್ತನಾದರೆ ಓಕೆ,ಆದರೆ ಕೃಷ್ಣನಿಗೆ ವಿರೋಧವೇಕೆ? ಡಿಕೆ ಶಿವಕುಮಾರ್ ರಾಜಕಾರಣಿಯಾಗಿ ಬುದ್ಧಿವಂತರು.ಇದನ್ನು ವಿರೋಧ ಮಾಡಿದಷ್ಟೂ ಡಿಕೆ ಶಿವಕುಮಾರ್ ಅವರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಜಾರಿ ಬೀಳುತ್ತದೆ.ಅದು ಡಿಕೆಶಿವಕುಮಾರ್ ಅವರಿಗೆ ಚೆನ್ನಾಗಿಯೇ ಗೊತ್ತು ಎಂದು ತಿರುಗೇಟು ನೀಡಿದರು.  ಮೇಲಿನವರ ಕೃಪಾಕಟಾಕ್ಷ ತಮ್ಮ ಮೇಲೆ ಬೀಳಲಿ ಎಂದೇ ಡಿಕೆ ಶಿವಕುಮಾರ್ ಏಸು ಕ್ರಿಸ್ತನ ಪ್ರತಿಮೆಯನ್ನು ಶಂಕುಸ್ಥಾಪನೆ ಮಾಡಿದ್ದಾರೆ.ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ.ಹಾಗಾಗಿ ಯೋಚನೆ ಮಾಡಿ‌ ಬುದ್ಧಿವಂತಿಕೆಯಿಂದ ಹೀಗೆ ಮಾಡುತ್ತಿದ್ದಾರೆ.ರಾಜಕೀಯ ಲಾಭಕ್ಕೆ ಯಾವ ದೇವರನ್ನು ಪ್ರತಿಷ್ಠಾಪಿಸಬೇಕು ಅನ್ನೋದು ಡಿಕೆಶಿವಕುಮಾರ್ ಗೆ ಕರಗತಕವಾಗಿರುವ ವಿದ್ಯೆ ಎಂದು ಲೇವಡಿ ಮಾಡಿದರು.  ಜೈಲಿಗೆ ಹೋಗುವ ಮುನ್ನ ಯಾವ ದೇವಸ್ಥಾನಕ್ಕೆ ಭೇಟಿ ನೀಡಬೇಕು? ಜೈಲಿಂದ ಹೊರ ಬಂದ ಮೇಲೆ ಯಾವ ದೇವಸ್ಥಾನಕ್ಕೆ ತೆರಳಬೇಕು? ಈ ಕುರಿತು ರಾಜಕಾರಣ ಹೇಗೆ ಮಾಡಬೇಕು ಎನ್ನುವುದು ಮಾಜಿ ಸಚಿವ ಡಿಕೆಶಿವಕುಮಾರ್ ಅವರಿಗೆ ಚೆನಾಗಿ ಗೊತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.  ಪ್ರತಿಮೆ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ ಇದ್ದರೆ, ಕಾನೂನು ನೋಡಿಕೊಳ್ಳುತ್ತದೆ.ಪ್ರತಿಮೆ ನಿರ್ಮಾಣ ಕುರಿತು ಪಕ್ಷ, ಸರ್ಕಾರ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಇದೇ ವೇಳೆ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.  ಮಂಗಳೂರಿಗೆ ಪಶ್ಚಿಮ ಬಂಗಾಳದ ನಿಯೋಗ ಭೇಟಿ ವಿಚಾರವಾಗಿ ಪ್ರತಿಕ್ರಿಯಿ ಸಿದ ಅವರು,ಕ್ರಿಮಿನಲ್ ಗಳಿಗೆ ಪರಿಹಾರ ನೀಡಬಾರದು ಎನ್ನುವುದು ನಮ್ಮ ಉದ್ದೇಶ.ಪಶ್ಚಿಮ ಬಂಗಾಳದವರು ರಾಜಕೀಯ ಕಾರಣಕ್ಕೆ ಪರಿಹಾರ ಕೊಟ್ಟಿದ್ದಾರೆ.ಎಲ್ಲ ವನ್ನೂ ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡುತ್ತಾರೆ ಅವರು.ಇದಕ್ಕೆಲ್ಲ ಜಗ್ಗಲ್ಲ, ಕಾಯ್ದೆ ಜಾರಿ ತಡೆಯಲು ಸಾಧ್ಯವಿಲ್ಲ.ಕಾಯ್ದೆ ವಿರೋಧಕ್ಕೆ ಸಕಾರಣವೂ ಇಲ್ಲ.ಮುಸ್ಲಿಮರಿಗೆ ಒಂದು ದೇಶವನ್ನೇ ಕೊಟ್ಟಿರುವಾಗ ಇಲ್ಲಿ ಪೌರತ್ವ ಏಕೆ ಕೊಡಬೇಕು? ಎಂದು ಅವರು ಪ್ರಶ್ನಿಸಿದರು.