ನವದೆಹಲಿ, ಜ 29, ಭಾರತ ತಂಡದ ಮಾಜಿ ವೇಗಿ ಇರ್ಪಾನ್ ಪಠಾಣ್ ಅವರು ಟೆಸ್ಟ್ ಕ್ರಿಕೆಟ್ ಹ್ಯಾಟ್ರಿಕ್ ಸಾಧನೆಗೆ ಇದೀಗ 14 ವರ್ಷಗಳು ತುಂಬಿದೆ. ದೀರ್ಘಾವಧಿ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಎರಡನೇ ವೇಗಿ ಎಂಬ ಹಿರಿಮೆಗೆ ಪಠಾಣ್ 2006ರಲ್ಲಿ ಭಾಜನರಾಗಿದ್ದರು.
ಕರಾಚಿಯಲ್ಲಿ 2006ರ ಜನವರಿ 29 ರಂದು ಪಾಕಿಸ್ತಾನ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಭಾರತ ಎಡಗೈ ಮಾಜಿ ವೇಗಿಗೆ ಸಲ್ಮಾನ್ ಬಟ್, ಯೂನಿಸ್ ಖಾನ್ ಹಾಗೂ ಮೊಹಮ್ಮದ್ ಯೂಸಫ್ ಬಲಿಯಾಗಿದ್ದರು. ಪಂದ್ಯದ ಮೊದಲನೇ ಓವರ್ ನಲ್ಲಿಯೇ ಪಠಾಣ್ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಸಾಧನೆಯನ್ನು ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಮೂವರು ಬೌಲರ್ ಗಳು ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಹರಭಜನ್ ಸಿಂಗ್ ಹಾಗೂ ಜಸ್ಪ್ರಿತ್ ಬುಮ್ರಾ ಈ ಸಾಧನೆ ಮಾಡಿದ ಇತರೆ ಇಬ್ಬರು ಬೌಲರ್ ಗಳಾಗಿದ್ದಾರೆ. ಜನವರಿ 4 ರಂದು ಇರ್ಫಾನ್ ಪಠಾಣ್ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.2007ರ ಉದ್ಘಾಟನಾ ಐಸಿಸಿ ಟಿ-20 ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಇರ್ಫಾನ್ ಪಠಾಣ್ ಮಹತ್ತರ ಪಾತ್ರ ವಹಿಸಿದ್ದರು. ನಾಲ್ಕು ಓವರ್ ಗಳಲ್ಲಿ ಕೇವಲ 16 ರನ್ ನೀಡಿ ಮೂರು ವಿಕೆಟ್ ಪಡೆದುಕೊಂಡು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಎಡಗೈ ಮಾಜಿ ವೇಗಿ 29 ಟೆಸ್ಟ್, 120 ಏಕದಿನ ಹಾಗೂ 24 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಮೂರೂ ಮಾದರಿಯಲ್ಲಿ ಒಟ್ಟು 301 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಜತೆಗೆ, ಬ್ಯಾಟಿಂಗ್ ನಲ್ಲೂ ತಂಡದ ಆಪತ್ಪಾಂದವರಾಗಿದ್ದರು. ಒಂದು ಶತಕ ಹಾಗೂ 11 ಅರ್ಧಶತಕಗಳು ಸೇರಿದಂತೆ ಒಟ್ಟು 2,821 ರನ್ ದಾಖಲಿಸಿದ್ದಾರೆ.ಇರ್ಫಾನ್ ಪಠಾಣ್ ಸದ್ಯ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.