ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
International Women's Day celebration at Chosun College of Education
ಚಿಕ್ಕೋಡಿ 10: ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ನೀಡುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯವನ್ನು ಸಾಕಾರಗೊಳಿಸಬೇಕು ಎಂದು ಅಲ್ಲಮಪ್ರಭು ಸರ್ಕಾರಿ ಪ್ರೌಢಶಾಲೆ, ಚಿಂಚಣಿಯ ಜಿಲ್ಲಾ ಆದರ್ಶ ಉತ್ತಮ ಪ್ರಶಸ್ತಿ ವಿಜೇತ ಶಿಕ್ಷಕಿ ಎನ್.ಎ. ಕುಲಕರ್ಣಿ ಅಭಿಪ್ರಾಯಪಟ್ಟರು.ಸ್ಥಳೀಯ ಚೌಸನ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಹಿಳೆಯರಿಗೆ ಶಿಕ್ಷಣ, ಉತ್ತಮ ಆರೋಗ್ಯ ಹಾಗೂ ನಾಯಕತ್ವದ ಅವಕಾಶಗಳನ್ನು ನೀಡುವ ಮೂಲಕ ಅವರ ವ್ಯಕ್ತಿತ್ವ ವಿಕಾಸಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಅತಿಥಿಯಾಗಿ ಆಗಮಿಸಿದ ಸ್ಥಳೀಯ ಮಹಿಳಾ ಉದ್ಯಮಿ ಪಾರ್ವತಿ ಕಮತೆ ಮಾತನಾಡಿ, ಮಹಿಳೆಯರು ಸಮಾನತೆ, ಗೌರವ ಮತ್ತು ಅವಕಾಶಗಳೊಂದಿಗೆ ಮುಂದುವರೆದಾಗ ಸಮಾಜವೂ ಶಕ್ತಿಶಾಲಿಯಾಗುತ್ತದೆ. ಮಹಿಳೆಯರು ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅಂಜದೆ ದುಡಿಯುವುದರ ಮೂಲಕ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸ್ವಂತ ಉದ್ಯೋಗದಲ್ಲಿ ಯಶಸ್ಸು ಸಾಧಿಸಿದ ಮಹಿಳೆಯರಾದ ಸವಿತಾ ಪಾಟೀಲ್ ಹಾಗೂ ಸುರೇಖಾ ಕೋರೆ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶ್ರೀಮತಿ ತನುಜಾ ಎಸ್. ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಸವಾಲುಗಳ ನಡುವೆಯೂ ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮಹತ್ವದ ಸಾಧನೆಗಳನ್ನು ಮಾಡುತ್ತಿರುವ ಮಹಿಳೆಯರು ದೇಶದ ಅಭಿವೃದ್ಧಿಗೆ ಮಹೋನ್ನತ ಕೊಡುಗೆ ನೀಡುತ್ತಿದ್ದಾರೆ.
ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಶಿಕ್ಷಣದಲ್ಲಿ ಹೆಚ್ಚಿನ ಆದ್ಯತೆ ದೊರೆಯಬೇಕೆಂದು ಆಶಿಸಿದರು.ಈ ಸಂದರ್ಭದಲ್ಲಿ ಗ್ರಾಮೀಣ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಶಿಕ್ಷಕರ ಪಾತ್ರ ಹಾಗೂ ಆರ್ಥಿಕ ಸ್ವಾವಲಂಬನೆ ವಿಷಯಗಳ ಕುರಿತು ಚರ್ಚಾಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು. ಪ್ರಶಿಕ್ಷಣಾರ್ಥಿಗಳಾದ ಅನಿಲ್ ಧನವಾಡಿ, ರಂಜಿತ್ ಕುಕಟೆ, ನರೇಂದ್ರ ಅವಳೆ, ಅನುಜಾ ಮೇತ್ರಿ, ಸುಶ್ಮಿತಾ ಕಮ್ಮಾರ್ ಹಾಗೂ ಸೌಭಾಗ್ಯ ಬೋರ್ಗಾವಿ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದರು.
ಪ್ರಾಧ್ಯಾಪಕರಾದ ಡಾ. ಎಸ್.ಎಸ್. ಹಲ್ಕಿ ಮಹಿಳೆಯರ ಆರ್ಥಿಕ ಸಬಲತೆಯ ಕುರಿತು ಮಾತನಾಡಿದರು.ಪ್ರಾಧ್ಯಾಪಕರಾದ ಡಾ. ನಂದಕುಮಾರ್ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕನಕಾಚಲ ಕನಕಗಿರಿ ಪ್ರಶಿಕ್ಷಣಾರ್ಥಿಗಳಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರನಾಥ್ ಟಿ. ಚೌಗುಲೆ, ಮಾಜಿ ಶಾಸಕಿ ಶಕುಂತಲಾ ಟಿ. ಚೌಗುಲೆ, ಚೌಸನ್ ನರ್ಸರಿ ಶಾಲೆಯ ನಿರ್ದೇಶಕಿ ಸವಿತಾ ಹೆಗಡೆ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಉಪನ್ಯಾಸಕರಾದ ಎಂ.ಹೆಚ್. ರಾವತ್, ಪ್ರಶಾಂತ್ ಪತ್ತಾರ್, ಕೃಷ್ಣ ಅರ್ಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸೌಂದರ್ಯ ಮೆಕನಮರಡಿ ಪ್ರಾರ್ಥಿಸಿದರು. ಅಶ್ವಿನಿ ಬಿಳಗಿ ಸ್ವಾಗತಿಸಿದರು. ಗಂಗೂ ಡೊಳ್ಳಿ ವಂದಿಸಿದರು. ಅನಿತಾ ಪೋತದಾರ ಹಾಗೂ ಪೂಜಾ ಜೆರಳಿ ಕಾರ್ಯಕ್ರಮವನ್ನು ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 