ಲೋಕದರ್ಶನ ವರದಿ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಂದಲೇ ಬದಲಾವಣೆ ಆರಂಭವಾಗಬೇಕು - ರುಚಿ ಬಿಂದಾಲ್
ಹಾವೇರಿ 18: ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆ ಮೊದಲು ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಸಬೇಕು. ಮಹಿಳೆಯರು ವಾಸ್ತವವನ್ನು ತಿಳಿದುಕೊಳ್ಳಬೇಕು ಹಾಗೂ ಮಹಿಳೆಯರಿಂದಲೇ ಬದಲಾವಣೆ ಆರಂಭವಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಾಲ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೌಶಲೈಆಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ-ಕರ್ನಾಟಕ ಗ್ರಾಮೀಣ ರಾಜ್ಯ ಜೀವನೋಪಾಯ ಅಭಿಯಾನ ಸಹಯೋಗಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸದಾ ಖುಷಿಯಾಗಿರಿ: ಮೊದಲು ಮಹಿಳೆ ಸುಶಿಕ್ಷಿತಳಾಗಬೇಕು, ತನ್ನ ವೈಯಕ್ತಿಕ ಶುಚಿತ್ವಕ್ಕೆ ಹಾಗೂ ಮನೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಹಿಳೆಯರು ಶ್ರಮಿಜೀವಿಗಳು, ಅವರ ಪರಿಶ್ರಮಕ್ಕೆ ಪ್ರಶಂಸೆ ಸಿಗುತ್ತಿಲ್ಲ. ಹಾಗಾಗಿ ಇಂದು ಉತ್ತಮ ಮಹಿಳಾ ಕೆಲಸಗಾರರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತಿದೆ. ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ ಸಹ ಧೈರ್ಯವಾಗಿ ಎದುರಿಸಬೇಕು ಹಾಗೂ ಸದಾ ಖುಷಿಯಾಗಿರಬೇಕು ಎಂದು ಸಲಹೆ ನೀಡಿದರು.
ವಿಮೆ ಮಾಡಿಸಿ: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಸೇರಿದಂತೆ ಸರ್ಕಾರ ವಿಮಾ ಯೋಜನೆಗಳನ್ನು ನೂರಕ್ಕೆ ನೂರಷ್ಟು ಮಾಡಿಸಬೇಕು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನರೇಗಾದಲ್ಲಿ ಮಹಿಳಾ ಕಾರ್ಮಿಕರು ಹೆಚ್ಚಾಗಲಿ: ಜಿಲ್ಲೆಯಲ್ಲಿ ನರೇಗಾದಡಿ ಕೆಲಸಮಾಡುವ ಮಹಿಳೆಯರ ಸಂಖ್ಯೆ ಶೇ.48ರಷ್ಟಿದೆ. ಬರುವ ದಿನಗಳಲ್ಲಿ ಈ ಸಂಖ್ಯೆ ಅಧಿಕವಾಗಬೇಕು. ಕೆಲಸದ ಅವಶ್ಯಕತೆ ಇರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಕೆಲಸ ನೀಡುವ ಮೂಲಕ ಅವರ ಆರ್ಥಿಕ ಸುಧಾರಣೆಗೆ ಶ್ರಮಿಸಬೇಕು. ಜೊತೆಗೆ ಸಂಜೀವಿನಿ ಸ್ವಸಹಾಯ ಸಂಘಗಳು ಸಾಲ ಪಡೆದ ಹಣದ ಸದುಪಯೋಗಬಾಗಬೇಕು ಹಾಗೂ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಬೇಕು. ತಮಗೆ ಮಾರುಕಟ್ಟೆ ವ್ಯವಸ್ಥೆ ಬೇಕಾದಲ್ಲಿ ನನ್ನು ಸಂಪರ್ಕಿಸಿ ನಾನು ತಮಗೆ ಸಹಾಯಮಾಡುವೆ ಎಂದು ಸಲಹೆ ನೀಡಿದರು.
ಮಹಿಳೆಯರ ವಿಮೆ ಮಾಡಿಸುವಲ್ಲಿ, ನರೇಗಾ ಮಹಿಳಾ ಕಾರ್ಮಿಕರ ಸಂಖ್ಯೆ ಹೆಚ್ಚಿಸುವ ಹಾಗೂ ಸಂಜೀವಿನಿ ಸ್ವ ಸಹಾಯ ಸಂಘಗಳು ಗುರಿ ಸಾಧನೆ ಮಾಡಿದವರನ್ನು ನನ್ನನ್ನು ಸ್ವಂತ ಹಣದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಜಿ.ಪಂ.ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ಅವರು ಸಂವಿಧಾನದಲ್ಲಿ ಮಹಿಳೆಯರಿಗೆ ಶಿಕ್ಷಣ, ಸಮಾನತೆ ಸೇರಿದಂತೆ ವಿವಿಧ ಹಕ್ಕುಗಳನ್ನು ನೀಡುವ ಮೂಲಕ ಅವರಿಗೆ ಗಟ್ಟಿ ನೆಲೆ ಕಲ್ಪಿಸಿಕೊಟ್ಟಿದ್ದಾರೆ. ಇಂದು ಗ್ರಾಮ ಪಂಚಾಯತಿಯಿಂದ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ವರೆಗೆ ಎಲ್ಲ ಹುದ್ದೆಗಳನ್ನು ಅಲಂಕರಿಸಿದ್ದಾರೆ. ತೊಟ್ಟಿಲನ್ನು ತೂಗುವ ಕೈ ದೇಶವನ್ನು ಆಳಬಲ್ಲದೆ ಎಂದು ತೋರಿಸಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶ್ರೀಮತಿ ಮಮತಾ ಹೊಸಗೌಡ್ರ ಅವರು ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ಪ್ರಮುಖವಾಗಿದೆ. ಸರ್ಕಾರ ಶಿಕ್ಷಣ, ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದೆ. ಸರ್ಕಾರದ ನೀಡಿದ ಅವಕಾಶದ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎಚ್.ಮೀಶೆ ಅವರು ಮಾತನಾಡಿ, ರಾಜ-ಮಹಾರಾಜರ ಕಾಲದಿಂದಲೂ ಮಹಿಳೆಯರು ರಾಜ್ಯಭಾರ ಮಾಡಿದ್ದಾರೆ. ಕಿತ್ತೂರ ರಾಣಿ ಚನ್ನಮ್ಮ, ಝಾನ್ಸಿಲಕ್ಷ್ಮೀಬಾಯಿ ಸೇರಿದಂತೆ ಅನೇಕ ಮಹಿಳೆಯರು ಶತ್ರುಗಳ ವಿರುದ್ಧ ಶೌರ್ಯದಿಂದ ಹೋರಾಡಿದ್ದು ಇತಿಹಾಸ. ಇಂತಹ ವೀರ ಮಹಿಳೆಯರ ಗುಣಗಳನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಅಕ್ಷತಾ ಕೆ.ಸಿ. ಅವರು ಮಾತನಾಡಿ, ಬಸವಣ್ಣನವರು, ಡಾ.ಬಿ.ಆರ್.ಅಂಬೇಡ್ಕರ ಹಾಗೂ ಸಾವಿತ್ರಿಬಾಯಿಫುಲೆ ಅವರು ಮಹಿಳಾ ಸಮಾನತೆಗೆ ಹೋರಾಡಿದ ಮಹಾನ್ ವ್ಯಕ್ತಿಗಳು. ಎಲ್ಲರೂ ಮಾತಿನಲ್ಲಿ ಹೇಳುತ್ತಾರೆ ಮಹಿಳೆಗೆ ಸಮಾನ ಅವಕಾಶ ನೀಡಲಾಗಿದೆ, ಆದರೆ ಇಂದಿಗೂ ಮಹಿಳೆ ಮೇಲೆ ಅತ್ಯಾಚಾರ, ದೌರ್ಜನ್ಯಗಳ ಹಾಗೂ ಆ್ಯಸಿಡ್ ದಾಳಿಗಳು ನಡೆಯುತ್ತಿರುವುದು ವಿಷಾಧದ ಸಂಗತಿಯಾಗಿದೆ. ಮಹಿಳೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ದಿನನಿತ್ಯ ಹೋರಾಟ ಮಾಡುತ್ತಿದ್ದಾಳೆ ಎಂದು ಹೇಳಿದರು.
ಇಂದು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಸಂವಿಧಾನದಲ್ಲಿ ಮಹಿಳೆಗೆ ನೀಡಿದ ಹಕ್ಕುಗಳು ಕಾರಣವಾಗಿದೆ. ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು, ಮನೆಯಿಂದಲೇ ಸಮಾನತೆ ಆರಂಭವಾಗಬೇಕು. ಶಿಕ್ಷಣದಿಂದ ಮಹಿಳೆ ಎಲ್ಲವನ್ನೂ ಸಾಧಿಸಬಲ್ಲಳು. ಹಾಗಾಗಿ ಮಹಿಳೆ ಶಿಕ್ಷಣ ಪಡೆದುಕೊಳ್ಳಬೇಕು ಹಾಗೂ ಅನ್ಯಾಯದ ವಿರುದ್ಧ, ಅತ್ಯಾಚಾರಿಗಳ ವಿರುದ್ಧ ಒಟ್ಟಾಗಿ ಹೋರಾಟಮಾಡಬೇಕು ಎಂದು ಹೇಳಿದರು.
ರಾಣೇಬೆನ್ನೂರು ತಾಲೂಕಾ ಆರೋಗ್ಯಾಧಿಕಾರಿ ಶ್ರೀಮತಿ ರಾಜೇಶ್ವರಿ ಕದರಮಂಡಲಗಿ ಅವರು ಮಹಿಳೆಯರ ವೈಯಕ್ತಿಕ ಶುಚಿತ್ವ ಹಾಗೂ ಪರಿಸರ ಸ್ವಚ್ಛತೆ ಬಗ್ಗೆ ಉಪನ್ಯಾಸ ನೀಡಿದರು. ಶ್ರೀಮತಿ ವಿದ್ಯಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್, ಸ್ವಚ್ಛತಾ ವಾಹನದ ಚಾಲಕರು, ಸಹಾಯಕರು, ಮಹಿಳಾ ನೀರು ಗಂಟಿಯರು, ಮಹಿಳಾ ಕಾಯಕ ಬಂಧುಗಳು, ಪಶು ಸಖಿ, ಕೃಷಿ ಸಖಿ, ಸಂಜೀವಿನಿ ಸ್ವ ಸಹಾಯ ಸಂಘಳ ಪ್ರತಿನಧಿಗಳು ಸೇರಿದಂತೆ 104 ಜನ ಮಹಿಳೆಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ, ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶ್ರೀಮತಿ ದಿಲ್‌ಶಾದ್ ಉಪಸ್ಥಿತರಿದ್ದರು. ಶ್ರೀಮತಿ ಸುನಿತಾ ಸ್ವಾಗತಿಸಿದರು. ರಕ್ಷಾ ಅಣ್ಣಿಗೇರಿ ಕಾರ್ಯಕ್ರಮ ನಿರೂಪಿಸಿದರು.
ಅನಧಿಕೃತ ರೆಸಾರ್ಟ್ಸ್ ಹಾಗೂ ಹೋಂ ಸ್ಟೇಗಳಮೇಲೆ ಕಾನೂನು ಕ್ರಮ
ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷಗೆ ಸೂಕ್ತ ಕ್ರಮಕ್ಕೆ ಸೂಚನೆ
-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ
ಹಾವೇರಿ 18: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿನ ರೆಸಾರ್ಟ್ಸ್ ಹಾಗೂ ಹೋಂ ಸ್ಟೇಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲಾ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ರೆಸಾರ್ಟ್ಸ್ ಹಾಗೂ ಹೋಂ ಸ್ಟೇಗಳ ಮಾಲೀಕರಿಗೆ ಜಿಲ್ಲಾಧಿಕಾರಿ ಡಾವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿರುವ ಅನಧೀಕೃತ ರೆಸಾರ್ಟ್ಸ್ ಹಾಗೂ ಹೋಂ ಸ್ಟೇಗಳು ನೋಂದಣಿ ಮತ್ತು ಪರವಾನಿಗೆ(ಲೈಸನ್ಸ್) ಪಡೆಯದೇ ಕಾರ್ಯನಿರ್ವಹಿಸುತ್ತಿದ್ದಲ್ಲಿ ಅಂತಹ ರೆಸಾರ್ಟ್ಸ್ ಹಾಗೂ ಹೋಂ ಸ್ಟೇಗಳ ಮೇಲೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ, ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.
ಪೊಲೀಸರಿಂದ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿಯನ್ನು ಪಡೆಯದೇ ನಿರ್ಜನ ಪ್ರದೇಶ, ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಆಯಾ ರೆಸಾರ್ಟ್ಸ್ ಹಾಗೂ ಹೋಂ ಸ್ಟೇ ಮಾಲೀಕರೇ ಜವಾಬ್ದಾರರಾಗುತ್ತಾರೆ ಹಾಗೂ ಕಾನೂನಿನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ.
ರಾಜ್ಯದಲ್ಲಿರುವ ರೆಸಾರ್ಟ್ಸ್ ಹಾಗೂ ಹೋಂ ಸ್ಟೆಗಳಿಗೆ ಆಗಮಿಸುವ ಪ್ರವಾಸಿಗರ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ನೀಡುತ್ತಿರುವುದು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸೂಕ್ತ ಭದ್ರತೆ ಮತ್ತು ಸುರಕ್ಷತೆ ನೀಡುವುದು ನಿಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಯಾವುದಾದರೂ ಅಹಿತಕರ ಘಟನೆಗಳು ಸಂಭವಿಹಿಸದಂತೆ ಎಚ್ಚರಿಕೆ ವಹಿಸಲು ಹಾಗೂ ಸ್ಥಳ ವೀಕ್ಷಣಾ/ಕಾರ್ಯಕ್ರಮಗಳ ಪಟ್ಟಿಯನ್ನು ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ, 'ಎ' ಬ್ಲಾಕ್ ಎರಡನೇ ಮಹಡಿ ಜಿಲ್ಲಾಡಳಿತ ಭವನ ದೇವಗಿರಿ, ದೂರವಾಣಿ ಸಂಖ್ಯೆ 08375-296033 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾವಿ ಸಂ.
ಮಾ.20 ರಂದು ವಿದ್ಯುತ್ ವ್ಯತ್ಯಯ
ಹಾವೇರಿ 18: ಹೊಸರಿತ್ತಿ 33ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾರ್ಚ್ 20 ರಂದು ಗುರುವಾರ ತುರ್ತು ನಿರ್ವಹಣಾ ಕಾಮಗಾರಿ ಇರುವದರಿಂದ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಹೊಸರಿತ್ತಿ ಎನ್‌ಜೆ ವೈ ಮತ್ತು ರಾಮಪುರ ಎನ್‌ಜೆ ವೈ11 ಕೆವಿ ಮಾರ್ಗಗಳ ವ್ಯಾಪ್ತಿಯಲ್ಲಿ ಬರುವ ಹೊಸರಿತ್ತಿ, ರಾಮಪುರ, ಹಳೇರಿತ್ತಿ, ಅಗಸನಮಟ್ಟಿ, ಯಲಗಚ್ಚ ಗ್ರಾಮಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾವಿ ಸಂ.
ಮಾ.21 ರಂದು ಪ.ಜಾ,ಪ.ಪಂ.ಸಮುದಾಯಗಳ ಕುಂದು-ಕೊರತೆ ನಿವಾರಣೆ ಸಭೆ
ಹಾವೇರಿ 18: ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಕುಂದು-ಕೊರತೆ ನಿವಾರಣಾ ಸಭೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಮಟ್ಟದ ಎಲ್ಲ ಇಲಾಖೆ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಮಾ.21 ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಜರುಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಕರು ತಿಳಿಸಿದ್ದಾರೆ.