ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ: ಒಂದು ಮಾತು ಬದಲಿಸಿದ ಪರಿಸರ ಪ್ರಜ್ಞೆ

ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ: ಒಂದು ಮಾತು ಬದಲಿಸಿದ ಪರಿಸರ ಪ್ರಜ್ಞೆ International Plastic Bag Free Day: One word changed environmental awareness

ಪ್ರತಿ ವರ್ಷ ಜುಲೈ 3ರಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ಈ ದಿನ ಸಾರುತ್ತದೆ.

ಕೆಲವು ತಿಂಗಳ ಹಿಂದೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಾನು ಖರೀದಿಸಿದ ಅನಾನಸ್‌ನ್ನು ತಿಂದ ಬಳಿಕ ಅದರ ಪ್ಲಾಸ್ಟಿಕ್ ಚೀಲವನ್ನು ಕಿಟಕಿಯಿಂದ ಹೊರಗೆ ಎಸೆಯಲು ಮುಂದಾದೆ. ಆಗ ನನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆ, "ಅಣ್ಣಾ, ಪ್ಲಾಸ್ಟಿಕ್ ಹೊರಗೆ ಎಸೆಯಬೇಡಿ" ಎಂದು ನಿಧಾನವಾಗಿ ಹೇಳಿದರು. ಅವರ ಆ ಒಂದು ಮಾತು ನನ್ನನ್ನು ತಡೆಯಿತು. ಬಳಿಕ ರಸ್ತೆ ಬದಿಯಲ್ಲಿ ಹರಡಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ನೋಡಿದಾಗ, ನಾನು ಎಸೆಯಲಿದ್ದ ಆ ಚೀಲವೂ ಇದೇ ಕಸದ ಭಾಗವಾಗುತ್ತಿತ್ತು ಎಂಬ ಅರಿವು ಮೂಡಿತು.

ಆ ದಿನದಿಂದ ಪ್ಲಾಸ್ಟಿಕ್ ಬಳಕೆ ಮತ್ತು ಪರಿಸರದ ಬಗ್ಗೆ ನನ್ನ ದೃಷ್ಟಿಕೋನವೇ ಬದಲಾಯಿತು. ಪರಿಸರ ಸಂರಕ್ಷಣೆ ದೊಡ್ಡ ಅಭಿಯಾನಗಳಿಂದ ಮಾತ್ರ ಸಾಧ್ಯವಲ್ಲ; ಪ್ರತಿಯೊಬ್ಬರ ಸಣ್ಣ ಜವಾಬ್ದಾರಿಯುತ ನಡೆಗಳಿಂದಲೇ ಅದು ಆರಂಭವಾಗುತ್ತದೆ.

ಪ್ಲಾಸ್ಟಿಕ್ ಸುಲಭವಾಗಿ ಕೊಳೆಯುವುದಿಲ್ಲ. ಇದು ಮಣ್ಣು, ನೀರು, ಪ್ರಾಣಿ-ಪಕ್ಷಿಗಳು ಹಾಗೂ ಪರಿಸರದ ಮೇಲೆ ದೀರ್ಘಕಾಲದ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಬಟ್ಟೆಯ ಚೀಲ ಬಳಕೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದು ಹಾಗೂ ಏಕಬಳಕೆ ಪ್ಲಾಸ್ಟಿಕ್ ತಪ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನದ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ. ಏಕೆಂದರೆ ಪರಿಸರ ರಕ್ಷಣೆ ಒಂದು ಸಣ್ಣ ಜಾಗೃತಿಯಿಂದಲೇ ಆರಂಭವಾಗುತ್ತದೆ.